ಸಬ್ಸಿಡಿ ಸಹಿತ ಗ್ಯಾಸ್ ಸಿಲಿಂಡರ್ ಸೌಲಭ್ಯ ದುರುಪಯೋಗಕ್ಕೆ ಹೊಸ ಕ್ರಮ

Update: 2016-12-20 15:31 GMT

ಹೊಸದಿಲ್ಲಿ, ಡಿ.20: ಅಧಿಕ ವರಮಾನ ಹೊಂದಿರುವ ವ್ಯಕ್ತಿಗಳು ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ಪಡೆಯುವುದನ್ನು ತಡೆಗಟ್ಟುವ ಸರಕಾರದ ಉಪಕ್ರಮಕ್ಕೆ ಪೂರಕವಾಗಿ , ವಾರ್ಷಿಕ 10 ಲಕ್ಷ ರೂ. ಆದಾಯ ಇರುವ ವ್ಯಕ್ತಿಗಳ ವಿವರವನ್ನು ತೈಲ ಸಚಿವಾಲಯದೊಂದಿಗೆ ಆದಾಯ ತೆರಿಗೆ ಇಲಾಖೆಯು ಹಂಚಿಕೊಳ್ಳಲಿದೆ. ಸರಕಾರದ ಎರಡು ಇಲಾಖೆಗಳ ನಡುವೆ ಆಗಿರುವ ಒಪ್ಪಂದದ ಪ್ರಕಾರ, ತೆರಿಗೆ ಇಲಾಖೆಯು ಪಾನ್ ಕಾರ್ಡ್ ವಿವರ, ಮೊಬೈಲ್ ಸಂಖ್ಯೆ, ಹುಟ್ಟಿದ ದಿನಾಂಕ, ಲಿಂಗ, ಇ-ಮೇಲ್ ಐಡಿ, ಮನೆಯ ದೂರವಾಣಿ ಸಂಖ್ಯೆ, ಲಭ್ಯ ವಿಳಾಸ ಇತ್ಯಾದಿ ಮಾಹಿತಿಯನ್ನು ತೈಲ ಸಚಿವಾಲಕ್ಕೆ ಒದಗಿಸಲಿದೆ. ಅನರ್ಹ ವ್ಯಕ್ತಿಗಳ ಹೆಸರನ್ನು ಗ್ಯಾಸ್ ಏಜೆನ್ಸಿಗಳಿಗೆ ಕಳುಹಿಸಿಕೊಡಲಾಗುತ್ತದೆ. ಇದರಿಂದ ಷರತ್ತು ಉಲ್ಲಂಘಿಸಿ ಸಬ್ಸಿಡಿಯುಕ್ತ ಎಲ್‌ಪಿಜಿ ಸಿಲಿಂಡರ್ ಪಡೆಯುತ್ತಿರುವವರನ್ನು ಪತ್ತೆಹಚ್ಚಲು ಸುಲಭವಾಗುತ್ತದೆ.

   ಈ ಮಾಹಿತಿಯನ್ನು ಅತ್ಯಂತ ರಹಸ್ಯ ಮತ್ತು ಸುರಕ್ಷಿತ ವಿಧಾನದಲ್ಲಿ ವರ್ಗಾಯಿಸುವ ಕುರಿತ ತಿಳುವಳಿಕಾ ಪತ್ರ(ಮೆಮೊರ್ಯಾಂಡಮ್ ಆಫ್ ಅಂಡರ್‌ಸ್ಟಾಂಡಿಂಗ್) ಕ್ಕೆ ಉಭಯ ಸಚಿವಾಲಯಗಳ ನಡುವೆ ಸಹಿ ಬೀಳಲಿದೆ. ಇದುವರೆಗೆ ಆದಾಯ ತೆರಿಗೆ ಇಲಾಖೆಯು ಈ ಮಾಹಿತಿಯನ್ನು - ಇತರರೊಂದಿಗೆ ಮಾಹಿತಿ ಹಂಚಿಕೊಳ್ಳಬಾರದು ಮತ್ತು ತನಿಖೆಯ ದೃಷಿಯಿಂದ ಮಾತ್ರ ಉಪಯೋಗಿಸಬೇಕು- ಎಂಬ ಷರತ್ತಿನೊಂದಿಗೆ ಪೊಲೀಸ್, ಸಿಬಿಐ, ಇ.ಡಿ. ಮತ್ತಿತರ ಕಾನೂನು ಅನುಷ್ಠಾನ ವಿಭಾಗಳೊಂದಿಗೆ ಹಂಚಿಕೊಳ್ಳುತ್ತಿತ್ತು.

 ವಾರ್ಷಿಕ 10 ಲಕ್ಷಕ್ಕೂ ಹೆಚ್ಚಿನ ಆದಾಯ ಉಳ್ಳವರು ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ಪಡೆಯುವಂತಿಲ್ಲ ಎಂಬ ಸರಕಾರದ ನಿಯಮಕ್ಕೆ ಪೂರಕವಾಗಿ ಇದೀಗ ಕೈಗೊಂಡಿರುವ ಈ ನಿರ್ಧಾರಕ್ಕೆ ಸಿಬಿಡಿಟಿ (ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್) ಕೂಡಾ ಅನುಮೋದನೆ ನೀಡಿದೆ.

ಸರಕಾರದ ಕರೆಗೆ ಓಗೊಟ್ಟ ಕೆಲವರು ಸ್ವಪ್ರೇರಣೆಯಿಂದ ಎಲ್‌ಪಿಜಿ ಸಬ್ಸಿಡಿ ತ್ಯಾಗ ಮಾಡಿದ್ದಾರೆ. ಆದರೆ ಮಿತಿಗಿಂತ ಹೆಚ್ಚಿನ ಆದಾಯವಿರುವ ಕೆಲವರು ಇನ್ನೂ ಈ ರೀತಿ ಮಾಡಿಲ್ಲ. ಆದ್ದರಿಂದ ಸರಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಉನ್ನತ ಅಧಿಕಾರಿಯೋರ್ವರು ತಿಳಿಸಿದ್ದಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News