ನಾರ್ವೆಯಲ್ಲಿ ಭಾರತೀಯ ದಂಪತಿಯ ಮಗು ವಶ: ವರದಿ ಕೇಳಿದ ಸುಶ್ಮಾ
ಹೊಸದಿಲ್ಲಿ, ಡಿ.22: ಅನ್ಯಾಯ ಮಾಡಿದ್ದಾರೆಂಬ ಕ್ಷುಲ್ಲಕ ದೂರಿನ ಮೇಲೆ ತಮ್ಮ ಐದರ ಹರೆಯದ ಮಗುವನ್ನು ನಾರ್ವೆಯ ಅಧಿಕಾರಿಗಳು ಕೊಂಡೊಯ್ದಿದ್ದಾರೆಂಬ ಭಾರತೀಯ ದಂಪತಿಯೊಂದರ ಆರೋಪದ ಬಗ್ಗೆ ವರದಿಯೊಂದನ್ನು ನೀಡುವಂತೆ ನಾವೆಯ ಭಾರತೀಯ ರಾಯಭಾರಿಗೆ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಇಂದು ಆದೇಶಿಸಿದ್ದಾರೆ.
ವರದಿಯೊಂದನ್ನು ತನಗೆ ಕಳುಹಿಸುವಂತೆ ನಾರ್ವೆಯ ಭಾರತೀಯ ರಾಯಭಾರಿಗೆ ಸೂಚಿಸಿದ್ದೇನೆಂದು ಸುಶ್ಮಾ ಟ್ವೀಟಿಸಿದ್ದಾರೆ.
ತಮ್ಮ ಮಗುವನ್ನು ಮರಳಿ ಪಡೆಯಲು ದಂಪತಿ ಬಿಜೆಪಿ ನಾಯಕ ವಿಜಯ್ ಜಾಲಿಯವರ ನೆರವು ಕೋರಿದ್ದರು. ವಿಜಯ್, ಈ ಬಗ್ಗೆ ಸುಶ್ಮಾ ಹಾಗೂ ನಾರ್ವೆಯ ಭಾರತೀಯ ರಾಯಭಾರಿಗೆ ಪತ್ರ ಬರೆದಿದ್ದರು.
ಓಸ್ಲೊದಲ್ಲಿರುವ ತಮ್ಮ ದೂತಾವಾಸದ ಅಧಿಕಾರಿಗಳು ಬಾಲಕನ ತಂದೆ ಅನಿಲ್ ಶರ್ಮ ಎಂಬವರಲ್ಲಿ ಮಾತನಾಡಿದ್ದು, ಸಂಪೂರ್ಣ ಬೆಂಬಲ ನೀಡಿದ್ದಾರೆ. ಆದಾಗ್ಯೂ, ಪ್ರಕರಣದಲ್ಲಿ ವ್ಯವಹರಿಸಲು ತಾನು ವಕೀಲರೊಬ್ಬರನ್ನು ಗೊತ್ತು ಮಾಡಿದ್ದೇನೆಂದು ಶರ್ಮಾ ದೂತಾವಾಸಕ್ಕೆ ಮಾಹಿತಿ ನೀಡಿದ್ದಾರೆಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದ ಬಗ್ಗೆ ನಿನ್ನೆ ಸಂಜೆ ದೂತಾವಾಸಕ್ಕೆ ತಿಳಿಯಿತು. ತಮಗೆ ಹೆಚ್ಚಿನ ಮಾಹಿತಿ ನೀಡುವಂತೆ ನಾರ್ವೆಯ ಸಂಬಂಧಿತ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅವರ ಉತ್ತರವನ್ನು ಕಾಯುತ್ತಿದ್ದೇವೆಂದು ಭಾರತದಲ್ಲಿರುವ ನಾರ್ವೆ ದೂತಾವಾಸದ ಅಧಿಕಾರಿಗಳು ಹೇಳಿದ್ದಾರೆ.
ಆಧಾರ ರಹಿತ ಹಾಗೂ ಕಲ್ಪಿತ ದೂರಿನ ಮೇಲೆ ನಾರ್ವೆಯ ಮಕ್ಕಳ ಕಲ್ಯಾಣ ಇಲಾಖೆ ಡಿ.13ರಂದು ಓಸ್ಲೊದಲ್ಲಿ ಬಾಲಕ ಆರ್ಯನ್ ಎಂಬಾತನನ್ನು ಬಲಾತ್ಕಾರವಾಗಿ ವಶಕ್ಕೆ ಪಡೆದಿರುವ ಕುರಿತು ವಿಜಯ್ ಜಾಲಿ, ಭಾರತೀಯ ರಾಯಭಾರಿ ದೇವರಾಜ್ ಪ್ರಧಾನ್‌ರಿಗೆ ಬರೆದಿದ್ದ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಶರ್ಮಾ ‘ಬಿಜೆಪಿಯ ಸಾಗರೋತ್ತರ ಮಿತ್ರರು’ ಸಂಘಟನೆಯ ಸದಸ್ಯರಾಗಿದ್ದಾರೆ.