ಸಹರಾ ಲಂಚ ಪ್ರಕರಣ : ರಾಹುಲ್ ಆರೋಪಕ್ಕೆ ಮೋದಿ ಉತ್ತರಿಸಲಿ: ಲಾಲು
ಪಾಟ್ನಾ, ಡಿ.22: ಸಹರಾದ ಅಧಿಕಾರಿಗಳಿಂದ ಅ.2013ರಿಂದ ಫೆ.2014ರ ನಡುವೆ 7 ಬಾರಿ ಒಟ್ಟು ರೂ.40 ಕೋಟಿ ಲಂಚ ಪಡೆದಿದ್ದಾರೆಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಆರೋಪದ ಬಗ್ಗೆ ಪ್ರತಿಕ್ರಿಯಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆರ್‌ಜೆಡಿ ವರಿಷ್ಠ ಲಾಲುಪ್ರಸಾದ್ ಆಗ್ರಹಿಸಿದ್ದಾರೆ.
ಸಹರಾದಿಂದ ರೂ.40 ಕೋಟಿ ಲಂಚ ಪಡೆದ ಅವರು ಫಕೀರರಾಗಿರಲು ಹೇಗೆ ಸಾಧ್ಯ? ರಾಹುಲ್‌ರ ಆರೋಪಕ್ಕೆ ಪ್ರಧಾನಿ ಸ್ವತಃ ಉತ್ತರ ನೀಡಬೇಕು. ಅದನ್ನವರು ನಿರಾಕರಿಸಲಾಗದು. ಈ ಬಗ್ಗೆ ನಿಗಾವಹಿಸಲು ಹಾಗೂ ತನಿಖೆಗಾಗಿ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯ ಅಧೀನದ ತನಿಖೆ ಸಮಿತಿಯೊಂದಕ್ಕಾಗಿ ತಾನು ಒತ್ತಾಯಿಸುತ್ತಿದ್ದೇನೆಂದು ‘ಇಂಡಿಯಾ ಟುಡೆ’ ಟಿವಿಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.
ಸರಕಾರವು ನೋಟು ರದ್ದತಿ ಜಾರಿಗೊಳಿಸಿದ ಕ್ರಮವನ್ನು ಪ್ರತಿಭಟಿಸಲು ಡಿ.28ರಂದು ಪಾಟ್ನಾದಲ್ಲಿ ‘ಮಹಾ ಧರಣಿಯೊಂದನ್ನು’ ನಡೆಸುವ ಘೋಷಣೆಯನ್ನು ಲಾಲು ಮಾಡಿದ್ದಾರೆ.
ತನಗೆ 50 ದಿನ ಅವಕಾಶ ನೀಡುವಂತೆ ಮೋದಿ ಸಾರ್ವಜನಿಕರಿಗೆ ಗರ್ಜಿಸಿದ್ದಾರೆ. 50 ದಿನಗಳಲ್ಲಿ ಕಪ್ಪು ಹಣ ಹಾಗೂ ಭ್ರಷ್ಟಾಚಾರ ಮಟ್ಟ ಹಾಕುವೆನೆಂದು ಅವರು ಹೇಳಿದ್ದಾರೆ. ದೇಶ ಬದಲಾಗಲಿದೆಯೆಂದೂ ಮೋದಿ ಹೇಳಿದ್ದಾರೆ. ಈಗ 50 ದಿನಗಳ ಗಡುವು ಸಮೀಪಿಸುತ್ತ ಬಂದಿದೆ. ಕ್ರಾಂತಿಯು ಈಗ ಆರಂಭವಾಗಲಿದೆ. ವಲಸೆ ಕಾರ್ಮಿಕರೀಗ ಊರುಗಳಿಗೆ ಹಿಂದಿರುಗುತ್ತಿದ್ದಾರೆ. ರೈತರಿಗೆ ಬೀಜ ದೊರೆಯುತ್ತಿಲ್ಲ. ತರಕಾರಿ ಬೆಳೆಗಾರರಿಗೆ ಉತ್ಪನ್ನ ಮಾರಲಾಗುತ್ತಿಲ್ಲ. ಸತ್ಯ ಹೊರ ಬರುವುದನ್ನು ಎಷ್ಟು ದಿನ ತಡೆಯಬಲ್ಲಿರಿ? ಎಂದು ಸಂದರ್ಶನದಲ್ಲಿ ಅವರು ಪ್ರಶ್ನಿಸಿದ್ದಾರೆ.
ಪಾಟ್ನಾದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಗಾಗಿ ಒಂದಾಗುವಂತೆ ತಾನು ಸಮಾನ ಮನಸ್ಕ ವಿಪಕ್ಷಗಳಿಗೆ ಮನವಿ ಮಾಡಲಿದ್ದೇನೆಂದು ಲಾಲು ಹೇಳಿದ್ದಾರೆ.