ಕಾರು ಖರೀದಿಸಲು ಹೊರಟಿದ್ದೀರಾ ? ಮೊದಲು ಪಾರ್ಕಿಂಗ್ ಜಾಗ ಖರೀದಿಸಿ ! ಏಕೆ ಗೊತ್ತೇ ?
ಹೊಸದಿಲ್ಲಿ,ಡಿ.22: ನೀವು ಕಾರು ಅಥವಾ ಬೈಕ್‌ನ್ನು ಖರೀದಿಸುವ ಯೋಜನೆ ಹೊಂದಿದ್ದರೆ ಅದನ್ನು ನಿಲ್ಲಿಸಲು ಸ್ಥಳವಿದೆ ಎನ್ನುವುದಕ್ಕೆ ರುಜುವಾತನ್ನು ಒದಗಿಸಬೇಕಾದ ದಿನಗಳು ಶೀಘ್ರವೇ ಬರಬಹುದು. ಇಂದಿಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಅವರು, ಹೊಸ ಕಾರು ಅಥವಾ ಇತರ ವಾಹನಗಳ ನೋಂದಣಿಗೆ ಸಾಕಷ್ಟು ಪಾರ್ಕಿಂಗ್ ಸ್ಥಳವಿದೆ ಎಂಬ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿದರೆ ಹೇಗೆ ಎನ್ನುವ ಮೂಲಕ ಇಂತಹುದೊಂದು ಸುಳಿವನ್ನು ನೀಡಿದ್ದಾರೆ.
ವಾಹನಗಳ ನೋಂದಾವಣೆಗೆ ಇಂತಹ ಷರತ್ತುಗಳನ್ನು ವಿಧಿಸುವ ಬಗ್ಗೆ ತನಗೆ ತುಂಬ ಆಸಕ್ತಿಯಿದೆ ಮತ್ತು ಈ ಬಗ್ಗೆ ತನ್ನ ಸಚಿವಾಲಯವು ಸಾರಿಗೆ ಸಚಿವಾಲಯದೊಂದಿಗೆ ಚರ್ಚೆ ನಡಸುತ್ತಿದೆ ಎಂದು ಅವರು ತಿಳಿಸಿದರು.
ಇದಕ್ಕೂ ಮುನ್ನ ದಿಲ್ಲಿ-ರಾಷ್ಟ್ರ ರಾಜಧಾನಿ ಪ್ರದೇಶ ಮತ್ತು ಮಧ್ಯಪ್ರದೇಶದ ಇಂದೋರ ಮತ್ತು ಭೋಪಾಲಗಳಲ್ಲಿ ಶೌಚಾಲಯಗಳನ್ನು ಹುಡುಕಲು ಜನರಿಗೆ ನೆರವಾಗುವ ‘ಗೂಗಲ್ ಟಾಯ್ಲೆಟ್ ಲೊಕೇಟರ್ ’ಗೆ ಅವರು ಚಾಲನೆ ನೀಡಿ ಮಾತನಾಡಿದ ಅವರು ಭವಿಷ್ಯದಲ್ಲಿ, ಶೌಚಾಲಯವಿಲ್ಲದ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅನುಮತಿಯಿಲ್ಲ ಎನ್ನುವುದನ್ನು ಕಡ್ಡಾಯಗೊಳಿಸಲಾಗುವದು ಎಂದು ತಿಳಿಸಿದರು.
ಶಾಪಿಂಗ್ ಮಾಲ್‌ಗಳು,ಆಸ್ಪತ್ರೆಗಳು,ಬಸ್/ರೈಲ್ವೆ ನಿಲ್ದಾಣಗಳು,ಪೆಟ್ರೋಲ್ ಬಂಕ್‌ಗಳು ಮತ್ತು ಮೆಟ್ರೋ ಸ್ಟೇಷನ್‌ಗಳು ಸೇರಿದಂತೆ 6,200ಕ್ಕೂ ಅಧಿಕ ಸಾರ್ವಜನಿಕ ಶೌಚಾಲಯಗಳ ತಾಣ ಮತ್ತು ಲಭ್ಯತೆಯ ಕುರಿತು ಗೂಗಲ್ ವೇದಿಕೆಯು ಮಾಹಿತಿಗಳನ್ನು ಒದಗಿಸಲಿದೆ ಎಂದು ನಾಯ್ಡು ತಿಳಿಸಿದರು.