ಎರಡು ಬಾಲಿವುಡ್ ಚಿತ್ರಗಳಲ್ಲಿ ಪ್ರಿಯಾಂಕಾ
ಹಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದರೂ, ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನ್ನು ಮರೆತಿಲ್ಲ. ಮುಂದಿನ ವರ್ಷ 2 ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸುವುದಾಗಿ ಆಕೆ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ತಾನು ನಟಿಸಲಿರುವ ಚಿತ್ರಗಳನ್ನು ನಿರ್ಧರಿಸಲೆಂದೇ ಇತ್ತೀಚೆಗೆ ಆಕೆ ಮುಂಬೈಗೆ ಬಂದಿದ್ದರು. ಜನವರಿ ಕೊನೆಯೊಳಗೆ ಯಾವ ಚಿತ್ರಗಳಲ್ಲಿ ನಟಿಸಬೇಕೆಂಬ ಕುರಿತು ಜನವರಿ ಕೊನೆಯೊಳಗೆ ತೀರ್ಮಾನಿಸುವುದಾಗಿ ಆಕೆ ಹೇಳಿದ್ದಾರೆ.
ಕ್ವಾಂಟಿಕೊ ಟಿವಿ ಸರಣಿಯ ಮೂಲಕ ಅಮೆರಿಕದಲ್ಲೂ ಪ್ರಿಯಾಂಕಾ ಹೆಸರು ಗಳಿಸಿದ್ದಾರೆ. ‘ಬೇವಾಚ್’ ಚಿತ್ರದ ಮೂಲಕ ಹಾಲಿವುಡ್‌ಗೂ ಆಕೆ ಪಾದಾರ್ಪಣೆ ಮಾಡಿದ್ದಾರೆ. ಜೊತೆಗೆ ಕ್ವಾಂಟಿಕೊ ಸರಣಿಯ ಸೀಸನ್2ನಲ್ಲೂ ಆಕೆ ಅಭಿನಯಿಸುತ್ತಿದ್ದಾರೆ.
‘ಬೇವಾಚ್’ ಚಿತ್ರದ ಟ್ರೇಲರ್ ಕೆಲವು ವಾರಗಳ ಹಿಂದೆ ಬಿಡುಗಡೆಯಾಗಿದ್ದು, ಭಾರತದಲ್ಲಿಯೂ ಪ್ರೇಕ್ಷಕರ ಗಮನಸೆಳೆದಿದೆ. ಈ ವರ್ಷ ‘ಗಂಗಾಜಲ್’ ಒಂದನ್ನು ಬಿಟ್ಟರೆ ಪ್ರಿಯಾಂಕಾ ಅಭಿನಯದ ಬೇರ್ಯಾವುದೇ ಚಿತ್ರವು ಬಿಡುಗಡೆಯಾಗಿಲ್ಲ. ಆದರೆ ಅಮೆರಿಕದಲ್ಲಿ ಟಿವಿ ತಾರೆಯಾಗಿ ಪ್ರಿಯಾಂಕಾ ಜನಪ್ರಿಯತೆಯ ತುತ್ತುತುದಿಗೇರಿದ್ದಾಳೆ. ಜಗತ್ತಿನಲ್ಲೇ ಗರಿಷ್ಠ ಸಂಭಾವನೆ ಸ್ವೀಕರಿಸುವ ಟಿವಿ ತಾರೆಯರ ಪಟ್ಟಿಯಲ್ಲಿ ಕೂಡಾ ಸ್ಥಾನಪಡೆದುಕೊಂಡಿದ್ದಾಳೆ.