ರಾಹುಲ್ ಬೋಸ್ ನಿರುತ್ತರ
‘ಮಿ.ಆ್ಯಂಡ್ ಮಿಸೆಸ್ ಅಯ್ಯರ್’, ‘ಜಪಾನೀಸ್ ವೈಫ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವಿಸ್ಮರಣೀಯ ಅಭಿನಯದ ಮೂಲಕ ಬಾಲಿವುಡ್‌ನಲ್ಲಿ ತನ್ನದೇ ಆದ ಇಮೇಜ್ ಸೃಷ್ಟಿಸಿಕೊಂಡಿರುವ ನಟ ರಾಹುಲ್ ಬೋಸ್ ಈಗ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದಾರೆ. ನಿರ್ದೇಶಕ ಅಪೂರ್ವ ಕಾಸರವಳ್ಳಿ ತನ್ನ ‘ನಿರುತ್ತರ’ ಚಿತ್ರದ ಮೂಲಕ, ರಾಹುಲ್ ಬೋಸ್‌ರನ್ನು ಸ್ಯಾಂಡಲ್‌ವುಡ್‌ಗೆ ಕರೆತಂದಿದ್ದಾರೆ.
‘ನಿರುತ್ತರ’ ಚಿತ್ರದಲ್ಲಿ ಅವರು ಕಾರ್ಪೊರೇಟ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ಪ್ರತಿಭಾವಂತ ನಟಿ ಭಾವನಾ ಅಭಿನಯಿಸಿದ್ದಾರೆ. ಐಂದ್ರಿತಾ ರೇ ಹಾಗೂ ಕಿರಣ್ ಶ್ರೀನಿವಾಸ್ ಚಿತ್ರದ ಇತರ ಮುಖ್ಯ ಪಾತ್ರಗಳಲ್ಲಿದ್ದಾರೆ.
ಚಿತ್ರದ ಸ್ಕ್ರಿಪ್ಟ್ ಓದಿದ ಬಳಿಕ ತನಗೆ ನಿರ್ದೇಶಕ ಅಪೂರ್ವ ಅವರ ಸಂವೇದನಾ ಶೀಲತೆಯ ಬಗ್ಗೆ ಭರವಸೆ ಮೂಡಿತೆಂದು ರಾಹುಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹೊಸಬರಾದರೂ, ರಾಹುಲ್ ಬೋಸ್ ತನ್ನ ಪಾತ್ರಕ್ಕೆ ತಾನೇ ಡಬ್ ಮಾಡಿದ್ದಾರೆ.
ಅಪೂರ್ವ ಕಾಸರವಳ್ಳಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಅಪೂರ್ವ ಅವರು ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಲವು ಕಲಾತ್ಮಕ ಚಿತ್ರಗಳ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಅವರ ಪುತ್ರ.