ಆಮಿರ್‌ಗೆ ರಾಜವೌಳಿ ಚಿತ್ರದಲ್ಲಿ ನಟಿಸುವಾಸೆ
ದಂಗಲ್ ಬಳಿಕ ತನ್ನ ಮುಂದಿನ ಚಿತ್ರ ಯಾವುದೆಂಬ ಗುಟ್ಟನ್ನು ಮಿ. ಪರ್‌ಫೆಕ್ಷನಿಸ್ಟ್ ಆಮಿರ್‌ಖಾನ್ ಈವರೆಗೆ ಬಿಟ್ಟುಕೊಟ್ಟಿಲ್ಲ. ಆದರೆ ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜವೌಳಿಯ ಜೊತೆ ಕೆಲಸ ಮಾಡುವ ಹಂಬಲವನ್ನು ಅವರು ವ್ಯಕ್ತಪಡಿಸಿದ್ದಾರೆ. ತಾನು ರಾಜವೌಳಿಯ ದೊಡ್ಡ ಅಭಿಮಾನಿಯೆಂದೇ ಆಮಿರ್ ಹೇಳಿಕೊಂಡಿದ್ದಾರೆ. ಒಂದು ವೇಳೆ ವೌಳಿ ಮಹಾಭಾರತ ಚಿತ್ರವನ್ನು ನಿರ್ಮಿಸುವ ಯೋಜನೆ ಹೊಂದಿದ್ದಲ್ಲಿ ಅದರಲ್ಲಿ ತಾನು ಕೃಷ್ಣ ಅಥವಾ ಕರ್ಣನ ಪಾತ್ರದಲ್ಲಿ ನಟಿಸಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.
ಇತ್ತೀಚೆಗೆ ದಂಗಲ್‌ನ ಪ್ರಚಾರಕ್ಕಾಗಿ ಹೈದರಾಬಾದ್‌ಗೆ ಆಗಮಿಸಿದ್ದ ಅವರು, ತೆಲುಗಿನ ಮೆಗಾ ತಾರೆಯರಾದ ಪವನ್‌ಕಲ್ಯಾಣ್ ಹಾಗೂ ಚಿರಂಜೀವಿ ಜೊತೆಗೆ ನಟಿಸುವ ಬಯಕೆಯನ್ನೂ ವ್ಯಕ್ತಪಡಿಸಿದ್ದರು.
ದಂಗಲ್‌ನ ತಮಿಳು ಆವೃತ್ತಿಗೆ ಕಂಠದಾನ ಮಾಡುವಂತೆ ತಾನು ತಮಿಳಿನ ಸೂಪರ್‌ಸ್ಟಾರ್ ರಜನಿಕಾಂತ್‌ರನ್ನು ಸಂಪರ್ಕಿಸಿದ್ದನ್ನು ಆಮಿರ್ ಈಗ ಬಹಿರಂಗಪಡಿಸಿದ್ದಾರೆ. ತನ್ನ ಧ್ವನಿಯನ್ನು ಪ್ರೇಕ್ಷಕರು ಸುಲಭದಲ್ಲಿ ಗುರುತಿಸಬಲ್ಲರು ಹಾಗೂ ತನ್ನ ಧ್ವನಿಯು ನಿಮ್ಮ ಮುಖಕ್ಕೆ ಒಪ್ಪುವುದಿಲ್ಲವೆಂದು ಹೇಳಿ ರಜನಿ ಸಾರ್ ಈ ಕೊಡುಗೆಯನ್ನು ವಿನಮ್ರವಾಗಿ ನಿರಾಕರಿಸಿದರೆಂದು ಆಮಿರ್ ತಿಳಿಸಿದ್ದಾರೆ.