ಬಾಲಿವುಡ್ ಒಪ್ಪಮ್ ಗೆ ದೇವಗನ್ ಹೀರೋ
ಬಾಕ್ಸ್‌ಆಫೀಸಿನಲ್ಲಿ ಭರ್ಜರಿ ಯಶಸ್ಸು ಕಂಡ ಮಲಯಾಳಂ ಚಿತ್ರ ಒಪ್ಪಮ್ ಬಾಲಿವುಡ್‌ಗೆ ರಿಮೇಕ್ ಆಗಲಿದೆ. ಒಪ್ಪಮ್‌ನ ನಿರ್ದೇಶಕ ಪ್ರಿಯದರ್ಶನ್ ಸ್ವತಃ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಅಜಯ್ ದೇವಗನ್ ನಾಯಕನಾಗಿ ನಟಿಸಲಿರುವುದು ಬಹುತೇಕ ಖಚಿತವಾಗಿದೆ. ಈ ಮೊದಲು ಅಜಯ್, ಮೋಹನ್ ಲಾಲ್ ಅಭಿನಯದ ಮಲಯಾಳಂ ಸೂಪರ್‌ಹಿಟ್ ಚಿತ್ರ ‘ದೃಶ್ಯಂ’ನ ಹಿಂದಿ ರಿಮೇಕ್‌ನಲ್ಲಿಯೂ ನಟಿಸಿದ್ದರು.
ನಿರ್ದೇಶಕ ಪ್ರಿಯದರ್ಶನ್ ಬಾಲಿವುಡ್ ಪ್ರೇಕ್ಷಕರ ಅಭಿರುಚಿಗೆ ಒಗ್ಗಿಕೊಳ್ಳುವ ರೀತಿಯಲ್ಲಿ ಚಿತ್ರಕತೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಕೂಡಾ ಅವರು ಮಾಡಿದ್ದಾರೆ. ‘ಒಪ್ಪಮ್’ ಚಿತ್ರದಲ್ಲಿ ಮೋಹನ್‌ಲಾಲ್, ಹಂತಕನ ಬೇಟೆಯಿಂದ ಬಾಲಕಿಯನ್ನು ರಕ್ಷಿಸುವ ಅಂಧನ ಪಾತ್ರದಲ್ಲಿ ನಟಿಸಿದ್ದಾರೆ. ಸೆಪ್ಟಂಬರ್‌ನಲ್ಲಿ ಬಿಡುಗಡೆಗೊಂಡ ಒಪ್ಪಮ್, ಈ ವರ್ಷದ ಅತ್ಯಧಿಕ ಗಳಿಕೆಯ ಮಲಯಾಳಂ ಚಿತ್ರಗಳಲ್ಲೊಂದಾಗಿದೆ. ಪ್ರಸ್ತುತ ಪ್ರಿಯದರ್ಶನ್, ತನ್ನ ನಿರ್ದೇಶನದ ಏಡ್ಸ್ ಜಾಗೃತಿ ಕುರಿತ ಸಿನೆಮಾ ‘ಚಿಲ ಸಮಯಂಗಳಿಲ್’ ಚಿತ್ರವನ್ನು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲು ಸಜ್ಜಾಗುತ್ತಿದ್ದಾರೆ. ಪ್ರಕಾಶ್‌ರಾಜ್ ಹಾಗೂ ಶ್ರೇಯಾ ರೆಡ್ಡಿ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.