ದಂಗಲ್ ಚಿತ್ರದ ಪ್ರೇಕ್ಷಕರಿಗೆ ಎರಡು ಬಾರಿ ರಾಷ್ಟ್ರಗೀತೆ !
ಮುಂಬೈ, ಡಿ. 24 : ಥಿಯೇಟರ್ ಗಳಲ್ಲಿ ಚಿತ್ರ ಪ್ರದರ್ಶನ ಪ್ರಾರಂಭವಾಗುವ ಮೊದಲು ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ನುಡಿಸಬೇಕು ಎಂದು ಇತ್ತೀಚಿಗೆ ಆದೇಶ ನೀಡಿರುವ ಕುರಿತು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಕೆಲವೆಡೆ ಈ ಬಗ್ಗೆ ಜಟಾಪಟಿ ನಡೆದು ಪ್ರಕರಣ ದಾಖಲಾಗಿ ಬಂಧನಗಳೂ ನಡೆದಿವೆ.
ಈ ನಡುವೆ ಶುಕ್ರವಾರ ಬಿಡುಗಡೆಯಾದ ಆಮಿರ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ದಂಗಲ್ ರಾಷ್ಟ್ರಗೀತೆ ನುಡಿಸುವ ಮತ್ತು ಆ ಸಂದರ್ಭದಲ್ಲಿ ಎದ್ದು ನಿಂತು ಗೌರವ ಸೂಚಿಸುವ ಒಂದಲ್ಲ, ಎರಡೆರಡು ಅವಕಾಶ ಸೃಷ್ಟಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಚಿತ್ರ ಆರಂಭಕ್ಕೆ ಮೊದಲು ಸರ್ಕಾರೀ ಆದೇಶದಂತೆ ರಾಷ್ಟ್ರ ಗೀತೆ ಪ್ರಸಾರವಾಗುತ್ತದೆ. ಆಗ ಎಲ್ಲ ಪ್ರೇಕ್ಷಕರು ಎದ್ದು ನಿಲ್ಲುತ್ತಾರೆ. ಚಿತ್ರದ ಎರಡನೇ ಭಾಗದಲ್ಲಿ ಫೋಗಟ್ (ಆಮಿರ್ ) ಪುತ್ರಿ ಗೀತಾ ನಿರೀಕ್ಷೆಯಂತೆ ಭಾರೀ ಪೈಪೋಟಿಯ ಬಳಿಕ ಅಂತಾರಾಷ್ಟ್ರೀಯ ಚಿನ್ನ ಗೆಲ್ಲುತ್ತಾರೆ. ಆಗ ಆಕೆಗೆ ಚಿನ್ನದ ಪದಕ ಪ್ರದಾನ ಮಡಿದ ಬಳಿಕ ಭಾರತದ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ. ಆಗ ಮತ್ತೆ ಥಿಯೇಟರ್ ನಲ್ಲಿರುವ ಎಲ್ಲ ಪ್ರೇಕ್ಷಕರು ಎದ್ದು ನಿಂತುಕೊಳ್ಳುತ್ತಾರೆ. ರಾಷ್ಟ್ರಗೀತೆ ಮುಗಿಯುವಾಗ ಚಿತ್ರದಲ್ಲಿ ಪುಟಾಣಿಗಳಿಬ್ಬರು ಭಾರತ್ ಮಾತಾಕಿ ಜೈ ಘೋಷಣೆ ಕೂಗುತ್ತಾರೆ.
ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ.