ಆರು ತಿಂಗಳಲ್ಲಿ ಭಾರತ ಸರಕಾರ ಫೇಸ್‌ಬುಕ್ ಬಳಿ ಇಷ್ಟು ಖಾತೆಗಳ ವಿವರ ಕೇಳಿತ್ತು
ಹೊಸದಿಲ್ಲಿ, ಡಿ.24: ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್ ಬಳಿ 2016ರ ಜನವರಿಯಿಂದ ಜೂನ್‌ವರೆಗಿನ ಆರು ತಿಂಗಳಲ್ಲಿ ಭಾರತ ಸರಕಾರ 8,290 ಖಾತೆಗಳ ವಿವರ ಕೇಳಿತ್ತು ಎಂದು ಫೇಸ್‌ಬುಕ್‌ನ ಸರಕಾರಿ ಕೋರಿಕೆ ವರದಿಯಲ್ಲಿ ತಿಳಿಸಲಾಗಿದೆ.
ಈ ಅವಧಿಯಲ್ಲಿ 23,854 ಖಾತೆಗಳ ವಿವರ ಕೇಳಿದ ಅಮೆರಿಕಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನದಲ್ಲಿ ಭಾರತ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತ ಸಲ್ಲಿಸಿದ್ದ ಕೋರಿಕೆಯ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2015ರ ಜುಲೈಯಿಂದ ಡಿಸೆಂಬರ್‌ವರೆಗಿನ ಆರು ತಿಂಗಳಲ್ಲಿ ಭಾರತ ಸರಕಾರ 7,018 ಫೇಸ್‌ಬುಕ್ ಖಾತೆಗಳ ವಿವರ ಕೇಳಿತ್ತು. 2016ರ ಕೋರಿಕೆಯ ಪೈಕಿ ಶೇ.53.59ರಷ್ಟು ಪ್ರಕರಣಗಳ ‘ಕೆಲವು ಮಾಹಿತಿ’ಯನ್ನು ತಾನು ಒದಗಿಸಲು ಸಾಧ್ಯವಾಗಿದೆ ಎಂದು ಫೇಸ್‌ಬುಕ್‌ನ ಉಪ ಪ್ರಧಾನ ಸಲಹೆಗಾರ ಕ್ರಿಸ್ ಸ್ಯಾಂಡರ್‌ಬಿ ತಿಳಿಸಿದ್ದಾರೆ.
ಸರಕಾರದ ಕೋರಿಕೆಯನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತದೆ. ಯಾವ ದೇಶ ಕೋರಿಕೆ ಸಲ್ಲಿಸಿದೆ ಎಂಬುದು ನಮಗೆ ಮುಖ್ಯವಲ್ಲ. ಕೋರಿಕೆಯ ಕಾನೂನುಬದ್ಧತೆಯನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಅದಾಗ್ಯೂ ಬಳಕೆದಾರರ ಮಾಹಿತಿಯನ್ನು ನೇರವಾಗಿ ಸರಕಾಕ್ಕೆ ಒದಗಿಸಲಾಗುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ.
ತನ್ನ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಯನ್ನು ರಕ್ಷಿಸುವ ರೀತಿಯಲ್ಲಿ ಕಣ್ಗಾವಲು ವ್ಯವಸ್ಥೆಯನ್ನು ಪರಿಷ್ಕರಿಸುವಂತೆ ಸರಕಾರಗಳನ್ನು ಒತ್ತಾಯಿಸಲು ಕೈಗಾರಿಕೆ ಮತ್ತು ನಾಗರಿಕ ಸಮಾಜದಲ್ಲಿರುವ ನಮ್ಮ ಸಹಭಾಗಿಗಳ ಜೊತೆ ಸೇರಿ ಯೋಜನೆ ರೂಪಿಸಲಾಗುವುದು ಎಂದವರು ಹೇಳಿದ್ದಾರೆ.