×
Ad

ದಿಲ್ಲಿಯ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಅನಾಥ ಬ್ಯಾಗ್

Update: 2016-12-24 21:25 IST

ಹೊಸದಿಲ್ಲಿ,ಡಿ.24: ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಅನಾಥ ಬ್ಯಾಗೊಂದು ಭಾರೀ ಆತಂಕವನ್ನು ಸೃಷ್ಟಿಸಿತ್ತು. ಭದ್ರತಾ ಅಧಿಕಾರಿಗಳು ತುದಿಗಾಲುಗಳಲ್ಲಿ ನಿಂತಿದ್ದು, ಬಾಂಬ್ ನಿಷ್ಕ್ರಿಯ ದಳವೂ ಸ್ಥಳಕ್ಕೆ ಆಗಮಿಸಿತ್ತು. 2.10 ಲ.ರೂ.ಗೂ ಅಧಿಕ ವೌಲ್ಯದ ಭಾರತೀಯ ಮತ್ತು ವಿದೇಶಿ ಕರೆನ್ಸಿ ಗಳಿದ್ದ ಈ ಬ್ಯಾಗನ್ನು ಅಲ್ಲಿ ‘ಮರೆತಿದ್ದ ’ ವಾರಸುದಾರ ಕೊನೆಗೂ ಆಗಮಿಸುವುದರೊಂದಿಗೆ ಇಡೀ ಪ್ರಕರಣ ಸುಖಾಂತ್ಯಗೊಂಡಿದೆ.


ರಾತ್ರಿ ಎಂಟು ಗಂಟೆಯ ಸುಮಾರಿಗೆ ಮೂರನೇ ಟರ್ಮಿನಲ್‌ನ ಆಗಮನ ಪ್ರದೇಶದಲ್ಲಿ ಕಂಬವೊಂದರ ಬಳಿಯಿದ್ದ ಅನಾಥ ಬ್ಯಾಗ್ ಸಿಐಎಸ್‌ಎಫ್ ಯೋಧನೋರ್ವನ ಕಣ್ಣಿಗೆ ಬಿದ್ದಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳವು ಬ್ಯಾಗ್‌ನ್ನು ಸಂಪೂರ್ಣ ತಪಾಸಣೆಗೊಳಪಡಿಸಿದಾಗ ಅದರಲ್ಲಿ ಬಾಂಬ್‌ನ ಬದಲು ಭಾರತ, ಯುರೋಪ್, ಥೈಲಂಡ್, ಭೂತಾನ್, ಇಂಡೋನೇಷ್ಯಾ, ಹಾಂಗ್‌ಕಾಂಗ್, ಚೀನಾ, ಸಿಂಗಾಪುರ ಮತ್ತು ಕೆನಡಾಗಳ ಕರೆನ್ಸಿಗಳು ಸೇರಿದಂತೆ 2.10 ಲ.ರೂ.ಗೂ ಅಧಿಕ ಹಣವಿತ್ತು.

ಇಷ್ಟಾದ ಬಳಿಕ ವಿಮಾನ ನಿಲ್ದಾಣಕ್ಕೆ ಧಾವಿಸಿದ ಡಬ್ಲೂ. ದೋರ್ಜಿ ಎಂಬಾತ ಬ್ಯಾಗ್ ತನ್ನದೆಂದು ತಿಳಿಸಿದ್ದಾನೆ. ಸಿಡ್ನಿಯಿಂದ ಬಂದಿದ್ದ ಸ್ನೇಹಿತನನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿ ಕಂಬದ ಬಳಿಯಿರಿಸಿದ್ದ ಬ್ಯಾಗ್‌ನ್ನು ಮರೆತೇಬಿಟ್ಟಿದ್ದೆ ಎಂದು ಆತ ವಿವರಿಸಿದ್ದು,ಅದನ್ನು ದೃಢಪಡಿಸಿಕೊಂಡ ಅಧಿಕಾರಿಗಳು ಬ್ಯಾಗ್‌ನ್ನು ಆತನಿಗೆ ವಾಪಸ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News