×
Ad

ನಗದು ಕೊರತೆಯ ನಡುವೆ ಉತ್ತರಪ್ರದೇಶಕ್ಕೆ ಹರಿದು ಬಂದ 5,000 ಕೋ.ರೂ.!

Update: 2016-12-24 23:59 IST

ಲಕ್ನೋ,ಡಿ.24: ಇಡೀ ದೇಶವೇ ನಗದು ಕೊರತೆಯಿಂದ ಸಂಕಷ್ಟದಲ್ಲಿದ್ದರೂ ಚುನಾವಣಾ ಜ್ವರದಲ್ಲಿರುವ ಉತ್ತರ ಪ್ರದೇಶಕ್ಕೆ ಸಾಕಷ್ಟು ನಗದು ಪೂರೈಸಲು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ವಿಶೇಷ ಮುತುವರ್ಜಿ ವಹಿಸಿರುವಂತಿದೆ. ಹೊಸದಾಗಿ ನಗದು ಪೂರೈಕೆಯಾಗಿರುವುದರಿಂದ ಕಳೆದ ಕೆಲವು ದಿನಗಳಿಂದ ಹಣದ ಕೊರತೆಯು ಮೊದಲಿನಂತಿಲ್ಲ ಎನ್ನುತ್ತಾರೆ ಬಿಜೆಪಿ ಕಾರ್ಯಕರ್ತರು.

ಎರಡು ದಿನಗಳ ಹಿಂದೆ ಜಿಲ್ಲೆಗೆ 1,650 ಕೋ.ರೂ.ಬಂದಿದ್ದು, ಬ್ಯಾಂಕುಗಳೀಗ 50,000 ರೂ.ವರೆಗೆ ಹಣವನ್ನು ಹಿಂಪಡೆಯಲು ಅವಕಾಶ ಕಲ್ಪಿಸಿವೆ ಎಂದು ಬನ್ಸ್‌ಗಾಂವ್‌ನ ಬಿಜೆಪಿ ಕಾರ್ಯಕರ್ತನೋರ್ವ ಹೇಳಿದ. ಅಕ್ಕಪಕ್ಕದ ಜಿಲ್ಲೆಗಳಲ್ಲೂ ಇವೇ ಮಾತುಗಳು ಕೇಳಿಬರುತ್ತಿವೆ.
ಪ್ರಧಾನಿ ನರೇಂದ್ರ ಮೋದಿಯವರು ಉ.ಪ್ರದೇಶದಲ್ಲಿ ಅಬ್ಬರದ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಸಮಯಕ್ಕೆ ಸರಿಯಾಗಿ ರಾಜ್ಯಕ್ಕೆ ಹಣ ಹರಿದು ಬಂದಿದೆ. ಹಾಗೆಂದು ಇದು ಹೆಚ್ಚಿನ ಸದ್ದು ಮಾಡಿಲ್ಲ. ಸುದ್ದಿಸಂಸ್ಥೆ ಐಎಎನ್‌ಎಸ್ ಡಿ.17ರಂದು ಆರ್‌ಬಿಐ ವಿಶೇಷ ವಿಮಾನದ ಮೂಲಕ ಉತ್ತರ ಪ್ರದೇಶಕ್ಕೆ 5,000 ಕೋ.ರೂ.ಯನ್ನು ರವಾನಿಸಿದೆ ಎಂದು ವರದಿ ಮಾಡಿದ್ದೇ ಈ ಕುರಿತ ಏಕೈಕ ಸುದ್ದಿಯಾಗಿತ್ತು. ಅನಾಮಿಕ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ಅದು ಈ ಸುದ್ದಿಯನ್ನು ನೀಡಿತ್ತು.
ನಮ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ನಮ್ಮನ್ನು ಭೇಟಿಯಾಗಿದ್ದರು ಮತ್ತು ಎಲ್ಲ ಸಂಸದರಿಂದ ಮರುಮಾಹಿತಿ ಪಡೆದುಕೊಂಡಿದ್ದರು. ಆರ್‌ಬಿಐನಿಂದ ಹೆಚ್ಚು ಹಣವನ್ನು ರವಾನಿಸಿ ಜನರ ಕಷ್ಟಗಳನ್ನು ಕಡಿಮೆ ಮಾಡುವಂತೆ ನಾವು ಅವರನ್ನು ಆಗ್ರಹಿಸಿದ್ದೆವು. ಅದಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಶೀಘ್ರವೇ ಹೆಚ್ಚಿನ ಹಣ ರಾಜ್ಯಕ್ಕೆ ಬರಲಿದೆ ಎಂದು ಅವರು ತಿಳಿಸಿದ್ದರು ಎಂದು ಫೈಝಾಬಾದ್ ಸಂಸದ ಲಲ್ಲು ಸಿಂಗ್ ಅವರು ಈ ಬಗ್ಗೆ ವಿಚಾರಿಸಿದ ವರದಿಗಾರರಿಗೆ ತಿಳಿಸಿದರು.
ತಾನು ರಾಜ್ಯಗಳಿಗೆ ಎಷ್ಟು ಹಣವನ್ನು ರವಾನಿಸುತ್ತೇನೆ ಎಂಬ ಮಾಹಿತಿಯನ್ನು ನೀಡಲಾಗುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆಯಾದರೂ, ಬಿಜೆಪಿ ನಾಯಕರು 5,000 ಕೋ.ರೂ.ಬಂದಿದೆ ಎನ್ನುತ್ತಿದ್ದಾರೆ.
 ಚುನಾವಣೆಯ ಮೇಲೆ ಕಣ್ಣಿಟ್ಟು ಉ.ಪ್ರದೇಶಕ್ಕೆ ಹೆಚ್ಚು ಹಣವನ್ನು ಒದಗಿಸಲಾಗಿದೆ ಎನ್ನುವುದನ್ನು ಸ್ಥಳೀಯ ಬಿಜೆಪಿ ನಾಯಕರು ನಿರಾಕರಿಸಿದ್ದಾರೆ. ಉ.ಪ್ರದೇಶಕ್ಕೆ ಹಣ ಬಂದಿದ್ದರೆ ಸಹಜವಾಗಿಯೇ ದೇಶದ ಉಳಿದ ಕಡೆಗಳಿಗೂ ಹಣ ಪೂರೈಕೆಯಾಗಿರುತ್ತದೆ ಎಂದು ಬನ್ಸ್‌ಗಾಂವ್‌ನ ಬಿಜೆಪಿ ಶಾಸಕ ಕಮಲೇಶ ಪಾಸ್ವಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News