ದಿನಸಿ ಲೆಸ್ ಅಡುಗೆ ಮಾಡೋದಕ್ಕೆ ಕಲಿಯಿರಿ

Update: 2016-12-25 05:03 GMT

 
ನವೆಂಬರ್ 9ರಿಂದ ನೋಟುನಿಷೇಧದ ಬಳಿಕ ನರೇಂದ್ರ ಮೋದಿಯ ಅಭಿಮಾನಿಗಳೆಲ್ಲ ಸಂತೋಷದಿಂದ ಬ್ಯಾಂಕ್‌ನ ಮುಂದೆ ಕ್ಯೂ ನಿಲ್ಲುತ್ತಿದ್ದರು. ಪತ್ರಕರ್ತ ಎಂಜಲು ಕಾಸಿ ಅವರ ಬಳಿ ಹೋಗಿ ‘‘ಸಾರ್...ನೀವು ಹಣ ಹಾಕೋದಕ್ಕೆ ನಿಂತಿದ್ದೀರಾ?’’

‘‘ಇಲ್ಲ ಸಾರ್’’ ಎಂದು ಅವರು ಉತ್ತರಿಸುತ್ತಿದ್ದರು.

‘‘ಹಾಗಾದರೆ ನೋಟು ವಿಡ್ರಾ ಮಾಡೋದಕ್ಕೆ ಕ್ಯೂ ನಿಂತಿದ್ದೀರಾ?’’ ಕಾಸಿ ಕೇಳಿದ.

‘‘ಎರಡೂ ಅಲ್ಲ ಸಾರ್. ಸೈನಿಕರು ಅಲ್ಲಿ ದೇಶ ಕಾಯುವಾಗ ನಾವು ಇಷ್ಟಾದರೂ ಮಾಡೋಣ ಅಂತ ಕ್ಯೂನಲ್ಲಿ ನಿಂತು, ಮೋದಿಯ ಕೆಲವು ಪವಾಡಗಳನ್ನು, ಅವರ ಹಿಂದಿನ ಜನ್ಮದ ಸಾಹಸಗಳನ್ನು, ಮುಂದೆ ಅವರು ಎತ್ತಲಿರುವ ವಿವಿಧ ಅವತಾರಗಳನ್ನು ಕ್ಯೂನಲ್ಲಿ ನಿಂತ ಇತರರಿಗೆ ವಿತರಿಸುವುದಕ್ಕಾಗಿ ನಾವೂ ಕ್ಯೂನಲ್ಲಿ ನಿಂತಿದ್ದೇವೆ...ಈ ಮೂಲಕ ದೇಶದ ಋಣ ತೀರಿಸುತ್ತಿದ್ದೇವೆ...’’ ಕಾಸಿ ಭಾವುಕನಾಗಿ ಬಿಟ್ಟಿದ್ದ.

ಆದರೆ ಒಂದು ತಿಂಗಳು ಕಳೆಯುತ್ತಿದ್ದಂತೆಯೇ ಮೋದಿಯ ಭಕ್ತರಾರೂ ಕ್ಯೂನಲ್ಲಿ ಕಾಣುತ್ತಿರಲಿಲ್ಲ. ಒಂದು ದಿನ ಒಬ್ಬ ಭಕ್ತ ರಸ್ತೆಯಲ್ಲಿ ಸಿಕ್ಕಿದ್ದೇ ಕಾಸಿ ಹಿಡಿದುಕೊಂಡ. ‘‘ಸಾರ್...ನೀವು ಈಗ ಕ್ಯೂನಲ್ಲಿ ಕಾಣಿಸ್ತಾ ಇಲ್ಲ ಯಾಕೆ?’’ ಪತ್ರಕರ್ತ ಎಂಜಲು ಕಾಸಿ ಕೇಳಿದ.

‘‘ಸಾರ್...ಈಗ ಎಲ್ಲ ಸಮಸ್ಯೆ ಮುಗಿದಿದೆ ಸಾರ್....ಬ್ಯಾಂಕ್‌ನಲ್ಲಿ ಯಾರೂ ಕ್ಯೂ ನಿಲ್ಲುತ್ತಾ ಇಲ್ಲ ಸಾರ್...’’ ಭಕ್ತ ಘೋಷಿಸಿ ಬಿಟ್ಟ.

‘‘ಹೌದೆ? ಎಲ್ಲರಿಗೂ ನೋಟು ವಿತರಣೆಯಾಗಿ ಆಯಿತೆ?’’ ಕಾಸಿ ಕುತೂಹಲದಿಂದ ಕೇಳಿದ. ಅವನಿಗೆ ಇನ್ನೂ ಆ ವಾರದ ಹಣ ಸಿಕ್ಕಿಯೇ ಇಲ್ಲ. ಬ್ಯಾಂಕ್‌ನಲ್ಲಿ ಕೇಳಿದ್ದಕ್ಕೆ ‘‘ನಿಮಗ್ಯಾಕೇರಿ...ಹತ್ತು ಸಾವಿರ ರೂಪಾಯಿ ದುಡ್ಡು?’’ ಎಂದು ಕೇಳಿದ್ದ.

‘‘ಸಾರ್ ಅಗತ್ಯ ಇತ್ತು ಸಾರ್...’’ ಕಾಸಿ ಗೋಗರೆದಿದ್ದ.

‘‘ಕಳೆದ ವಾರ ಕೊಟ್ಟ ಹಣ ಏನು ಮಾಡಿದ್ರೀರಿ...’’ ಬ್ಯಾಂಕ್ ಅಧಿಕಾರಿ ದಬಾಯಿಸಿದ್ದ.

‘‘ದಿನಸಿಗೆ ಕೊಟ್ಟಿದ್ದೆ ಸಾರ್...ದಿನಸಿ ಎಲ್ಲ ಮುಗಿದೋಯ್ತು...’’ ಎಂದಿದ್ದ ಕಾಸಿ.

‘‘ಏನ್ರೀ...ಹೀಗೆ ದಿನಸೀನೆಲ್ಲ ತಿಂದು ಮುಗಿಸಿದ್ರೆ ದೇಶದ ಕತೆ ಏನು? ದಿನಸಿ ಲೆಸ್ ಅಡುಗೆ ಮಾಡೋದಕ್ಕೆ ಕಲಿಯಿರಿ. ಡಿಜಿಟಲ್‌ನಲ್ಲಿ ಅಡುಗೆ ಮಾಡಿ. ದಿನಸಿ ಉಳಿಯುತ್ತೆ...ಅದಕ್ಕಾಗಿ ಹೊಸ ಆ್ಯಪ್ ಬಂದಿದೆ.....ಹಾಕಿಸ್ಕೊಳ್ಳಿ....ವ್ಹಾಟ್ಸಪ್‌ನಲ್ಲಿ ಬಗೆ ಬಗೆ ಬಿರಿಯಾನಿಗಳ ಫೋಟೋಗಳನ್ನು ಶೇರ್ ಮಾಡಿಕೊಳ್ಳಿ. ಮನೆಯಲ್ಲಿ ಹಬ್ಬ ಮಾಡಿ. ಖರ್ಚು ಕಡಿಮೆ ಮಾಡಿ...’’ ಬ್ಯಾಂಕ್ ಅಧಿಕಾರಿ ಸಲಹೆ ನೀಡಿದ್ದ. ಕಾಸಿ ತಲೆಯಾಡಿಸಿ ಬರಿಗೈಯಲ್ಲಿ ಬಂದಿದ್ದ. ಈಗ ನೋಡಿದರೆ ಭಕ್ತ ‘ಬ್ಯಾಂಕಲ್ಲಿ ಕ್ಯೂನೇ ಇಲ್ಲ’ ಎನ್ನುತ್ತಿದ್ದಾನೆ.

‘‘ಅದ್ಯಾಕೆ ಸಾರ್ ಕ್ಯೂ ಇಲ್ಲ....’’ ಕಾಸಿ ಕೇಳಿದ.

‘‘ಬ್ಯಾಂಕಲ್ಲಿ ಹಣವೇ ಇಲ್ಲ...ಮತ್ತೆ ಕ್ಯೂ ನಿಂತು ಏನು ಪ್ರಯೋಜನ?’’ ಎನ್ನುತ್ತಾ ಭಕ್ತ ಹಲ್ಲುಕಿರಿದ.

‘‘ಹಾಗಾದರೆ ಜನರೆಲ್ಲ ಬದುಕುವುದು ಹೇಗೆ?’’ ಕಾಸಿ ಆತಂಕದಿಂದ ಕೇಳಿದ.

‘‘ಏನು ಸಾರ್? ಜನರೆಲ್ಲ ಖುಷಿಯಾಗಿದ್ದಾರೆ ಸಾರ್. ಅವರೆಲ್ಲ ಆನ್‌ಲೈಟ್, ಡಿಜಿಟಲ್, ಪೇಟಿಎಂ ವ್ಯವಹಾರ ಮಾಡ್ತಾ ಆರಾಮವಾಗಿದ್ದಾರೆ ಸಾರ್. ದೇಶಕ್ಕೆ ದೇಶವೇ ಡಿಜಿಟಲ್ ಆಗಿ ಬಿಟ್ಟಿದೆ. ಹಣವನ್ನು ಕಿಸೆಯಲ್ಲಿ ಇಟ್ಟುಕೊಳ್ಳೋ ಅಗತ್ಯಾನೇ ಇಲ್ಲ ಸಾರ್...’’

‘‘ಹೌದಾ...?’’ ಎನ್ನುತ್ತಾ ತನ್ನ ಹಳೆ ಡಬ್ಬಾ ಮೊಬೈಲ್‌ನ್ನೊಮ್ಮೆ ಕಾಸಿ ಮುಟ್ಟಿ ನೋಡಿಕೊಂಡ.

‘‘ಹೌದು ಸಾರ್...ಮೊನ್ನೆ ನಮ್ಮ ಹಳ್ಳಿಯ ಬೈರಾ ಇದ್ದಾನಲ್ಲ....ಅವ್ನ ತನ್ನ ಲ್ಯಾಪ್‌ಟ್ಯಾಪ್‌ನಲ್ಲೇ ಗದ್ದೆಗೆ ಗೊಬ್ಬರ ತರಿಸ್ಕೊಂಡ. ಹಳ್ಳಿಗರೆಲ್ಲ ಸಖತ್ ಸಂತೋಷವಾಗಿದ್ದಾರೆ ಸಾರ್...ಈಗ ಜನರು ಮನೆಯಿಂದ ಹೊರ ಹೋಗುವಾಗ ಮನೆಗೆ ಬೀಗ ಹಾಕೋದೆ ಇಲ್ಲ...’’

‘‘ಯಾಕ್ರೀ...’’ ಕಾಸಿ ಅಚ್ಚರಿಯಿಂದ ಕೇಳಿದ.

‘‘ಅದೇರಿ...ಮನೆಯಲ್ಲಿ ಹಣಾನೇ ಇಲ್ಲ ಅಂದ್ಮೇಲೆ ಮನೆಗೆ, ತಿಜೋರಿಗೆ ಬೀಗ ಯಾಕ್ರೀ? ಎಲ್ಲ ಆನ್ಲೈನ್...ಕ್ಯಾಶ್‌ಲೆಸ್ ಇಕಾನಮಿ....ಹೆಂಗಿದೆ ನಮ್ಮ ಮೋದಿಜಿ ತಲೆ...’’ ಭಕ್ತ ವರ್ಣಿಸಿದ.

‘‘ಜನವರಿ ಒಂದರಿಂದ ಎಟಿಎಂನಲ್ಲಿ ಯಾವತ್ತಿನ ಹಾಗೆ ಹಣ ಬರಬಹುದಾ?’’ಕಾಸಿ ಆಸೆಯಿಂದ ಕೇಳಿದ.

‘‘ಇಲ್ಲಾರೀ...ಬರಲ್ಲ...ಎಲ್ಲ ಆನ್ಲೈನ್ ಆದ್ಮೇಲೆ ಎಟಿಎಂನಲ್ಲಿ ಯಾಕೆ ಹಣ? ಎಲ್ಲ ಎಟಿಎಂನ್ನು ಗುಜರಿಗೆ ಹಾಕಿ ಅದರಿಂದ ಬರುವ ಆದಾಯವನ್ನು ಬ್ಯಾಂಕ್‌ನ ತಿಜೋರಿ ಗಟ್ಟಿ ಮಾಡೋದಕ್ಕೆ ಬಳಸ್ತಾರಂತೆ....’’ ಭಕ್ತ ಎದೆಯುಬ್ಬಿಸಿ ಹೇಳಿದ.

‘‘ಹಾಗಾದರೆ ಈ ಎರಡು ಸಾವಿರ ರೂಪಾಯಿಯನ್ನು ಯಾಕೆ ಪ್ರಿಂಟ್ ಮಾಡಿರೋದು...?’’ ಕಾಸಿ ಸಿಟ್ಟಿನಿಂದ ಕೇಳಿದ.

‘‘ಅದು ಮೋದಿಯವರ ಪ್ಲಾನ್ ಸಾರ್. ಎಲ್ಲ ಎರಡು ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಕಾಳದಂಧೆಕೋರರು ಬಚ್ಚಿಡುತ್ತಾರೆ. ಆಗ ಅದರಲ್ಲಿರುವ ಚಿಪ್‌ನ ಮೂಲಕ ಕಪ್ಪು ಹಣವನ್ನು ಹಿಡೀಬಹುದು....’’ ಭಕ್ತ ತನ್ಮಯನಾಗಿ ಭಜಿಸಿದ.

‘‘ಅದರಲ್ಲಿ ಚಿಪ್ಪು ಇಲ್ಲ ಅಂತಾರೀ....’’ ಕಾಸಿ ನಿರಾಕರಿಸಿದ.

‘‘ಇದೆ ಇದೆ ಇದೆ. ಇಲ್ಲಾ ಅಂದ್ರೆ ಐಟಿಯೋರಿಗೆ ಈ ಹಣ ಇರೋದು ಗೊತ್ತಾಗೋದು ಹೇಗೆ? ಮೋದಿಯೋರಿಗೆ ಮಾತ್ರ ಆ ನೋಟಿನ ಚಿಪ್ಪು ಎಲ್ಲಿದೆ ಎನ್ನೋದು ಗೊತ್ತಿರುವುದು. ನಿಮಗೆ ಗೊತ್ತಾ? ಎರಡು ಸಾವಿರ ರೂಪಾಯಿ ನೋಟಿಗೆ ವಿದ್ಯುತ್ ತಂತಿ ಸಂಪರ್ಕ ಕೊಟ್ಟರೆ, ಒಂದು ಬಲ್ಬ್ ಉರಿಯುತ್ತಂತೆ. ರೈತರು ಅದರಲ್ಲಿ ಉತ್ಪತ್ತಿಯಾಗೋ ವಿದ್ಯುತ್‌ನಿಂದ ತಮ್ಮ ಗದ್ದೆಗೆ ನೀರು ಬಿಡಬಹುದಂತೆ....’’ ಭಕ್ತ ಹೇಳಿದ.

ಕಾಸಿ ಕರೆಂಟು ಹೊಡೆದವನಂತೆ ಭಕ್ತನನ್ನು ನೋಡಿದ. ‘‘ಹೌದಾ ಸಾರ್...ಗೊತ್ತೆ ಇರಲಿಲ್ಲ...ಅದರಲ್ಲಿ ಇನ್ನೇನೇನು ಉಪಯೋಗ ಇದೆ ಸಾರ್?’’

‘‘ಏನ್ರೀ...ಇಡೀ ನೋಟು ವೈಜ್ಞಾನಿಕವಾಗಿ ನಿರ್ಮಾಣವಾಗಿದೆ. ಮೋದಿಯ ಕ್ಯಾಶ್‌ಲೆಸ್ ಚಿಂತನೆಗೆ ಪೂರಕವಾಗಿದೆ. ನೀವು ಎರಡು ಸಾವಿರ ರೂಪಾಯಿಯನ್ನು ಕಿಸೆಯಲ್ಲಿ ಇಟ್ಟುಕೊಳ್ಳಬಹುದು. ಆದರೆ ಅದನ್ನು ನೇರವಾಗಿ ಉಪಯೋಗಿಸುವ ಹಾಗಿಲ್ಲ. ಯಾಕೆಂದರೆ ಎಲ್ಲೂ ಚಿಲ್ಲರೆ ಸಿಗಲ್ಲ. ಇದು ಮೋದಿಯ ಇನ್ನೊಂದು ತಂತ್ರ. ಕ್ಯಾಶ್‌ಲೆಸ್ ಇಕಾನಮಿಗೆ ಎರಡು ಸಾವಿರ ರೂಪಾಯಿಯ ಕೊಡುಗೆ ಬಹುದೊಡ್ಡದು....’’ ಭಕ್ತ ವಿವರಿಸಿದ. ‘‘ಬೇರೆ ಇನ್ನೇನೇನು ಕೊಡುಗೆ ಇದೆ ಎರಡು ಸಾವಿರ ರೂಪಾಯಿಯಲ್ಲಿ...’’ ಕಾಸಿ ಅಚ್ಚರಿಯಿಂದ ಕೇಳಿದ.

‘‘ಸಾರ್...ಅದರಲ್ಲಿ ಮೊಬೈಲ್ ಇಟ್ರೆ ಮೋದಿ ಭಾಷಣ ಬರೋ ಮಾತು ಹಳೆಯದಾಯಿತು. ಅದನ್ನು ಕಪ್ಪು ಹಣ ದಂಧೆ ಮಾಡೋರು ಕೈಯಲ್ಲಿಡ್ಕೊಂಡ್ರೆ ಸಾಕ್ ಅದರ ಕಲರ್ ಅವರ ಕೈಗೆ ಹತ್ತತ್ತೆ. ಕಿಸೆಯಲ್ಲಿಟ್ಕೊಂಡ್ರೆ ಅವರ ಕಿಸೆಗೆ ಕಲರ್ ಹತ್ತತ್ತೆ. ಆಗ ಸುಲಭದಲ್ಲಿ ಕಪ್ಪು ಹಣದಂಧೆ ಮಾಡೋರನ್ನು ಐಟಿಯವರು ಹಿಡೀಬಹುದು. ನೋಡಿ ಸಾರ್ ಮೋದಿ ತಲೆ...’’ ಭಕ್ತ ಹುಬ್ಬು ಹಾರಿಸಿದ.

ಕಾಸಿಗೆ ಮೋದಿಯ ಕುರಿತಂತೆ ಹೆಮ್ಮೆ ಅನ್ನಿಸಿತು. ಹೀಗೆ ಏಕಕಾಲದಲ್ಲಿ ವಿಜ್ಞಾನಿ, ಅರ್ಥಶಾಸ್ತ್ರಜ್ಞ, ಗಣಿತಜ್ಞ, ಶೆರ್ಲಾಕ್‌ಹೋಮ್, ಜೇಮ್ಸ್‌ಬಾಂಡ್ ಎಲ್ಲವೂ ಆಗಿರುವ ಮೋದಿ ನಿಜಕ್ಕೂ ವಿಷ್ಣುವಿನ ಹನ್ನೊಂದನೇ ಅವತಾರ ಆಗಿರಬಹುದೇ ಎಂಬ ಪ್ರಶ್ನೆ ಎದ್ದಿತು.

ಈಗ ಕಾಸಿ ಮೆಲ್ಲಗೆ ಭಕ್ತನ ಬಳಿ ಕೇಳಿದ ‘‘ಅದಿರಲಿ...ನೀವು ಏನು ಕೆಲಸ ಮಾಡ್ತಾ ಇದ್ದೀರಿ...’’

ಭಕ್ತ ಅತ್ತ ಇತ್ತ ಒಮ್ಮೆ ನೋಡಿ ಕಾಸಿಯ ಕಿವಿಯ ಬಳಿ ಬಂದು ಹೇಳಿದ ‘‘ಸಾರ್ ಒಂದು ಲಕ್ಷ ರೂಪಾಯಿಯ ಹಳೆ ನೋಟು ಇದ್ರೆ ತಂದು ಕೊಡಿ. ನಿಮಗೆ 60 ಸಾವಿರ ಸಾವಿರ ರೂಪಾಯಿ ವಾಪಸ್....ದೇಶಸೇವೆ ಸಾರ್... ದೇಶಸೇವೆ....ದೇಶಕ್ಕಾಗಿ ಇಷ್ಟಾದರೂ ಮಾಡದಿದ್ರೆ ಹೇಗೆ ಸಾರ್?’’ ಎಂದದ್ದೇ, ಕಾಸಿ ‘ಭಾರತ್ ಮಾತಾಕಿ ಜೈ’ ಎಂದು ಕೂಗಿ ಅಲ್ಲಿಂದ ಓಟಕ್ಕಿತ್ತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News