ಅಶ್ವಿನ್ , ಜಡೇಜ ,ಜಯಂತ್ ಯಾದವ್‌ಗೆ ವಿಶ್ರಾಂತಿ ಸಂಭವ
ಹೊಸದಿಲ್ಲಿ, ಡಿ. 26: ಇಂಗ್ಲೆಂಡ್ ವಿರುದ್ಧ ಜ.15ರಿಂದ ಆರಂಭಗೊಳ್ಳಲಿರುವ ಏಕದಿನ ಮತ್ತು ಟ್ವೆಂಟಿ-20 ಸರಣಿಗೆ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ ಮತ್ತು ಯುವ ಆಫ್ ಸ್ಪಿನ್ನರ್ ಜಯಂತ್ ಯಾದವ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಟೀಮ್ ಇಂಡಿಯಾಕ್ಕೆ ಮೂವರು ಸ್ಪಿನ್ನರ್‌ಗಳ ಅನುಪಸ್ಥಿತಿ ಮುಂದಿನ ಸರಣಿಯಲ್ಲಿ ಕಾಡಲಿದೆ.
ಈ ಮೂವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದ ಐತಿಹಾಸಿಕ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಾಂಗ್ಲಾ ಮತ್ತು ಆಸ್ಟ್ರೇಲಿಯ ವಿರುದ್ಧದ ಸಣಿಯ ತಯಾರಿಗೆ ಮೂವರು ಸ್ಪಿನ್ನರ್‌ಗಳು ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದ ಹೊರಗುಳಿಯಲಿದ್ದಾರೆ.
ಅಶ್ವಿನ್ ಮತ್ತು ಜಡೇಜ ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ತಂಡದಿಂದ ದೂರ ಉಳಿದಿದ್ದರು. ಯಾದವ್ ಅವರು ಸರಣಿಯಲ್ಲಿ ಚೊಚ್ಚಲ ಏಕದಿನ ಕ್ರಿಕೆಟ್ ಆಡಿದ್ದರು.ಬೌಲಿಂಗ್ ಆಲ್‌ರೌಂಡರ್‌ಗಳು ಟೆಸ್ಟ್ ತಂಡದ ಗೆಲುವಿನಲ್ಲಿ ದೊಡ್ಡ ಕೊಡುಗೆ ನೀಡಿದ್ದರು. ಅವರನ್ನು ಮುಂದಿನ ಟೆಸ್ಟ್ ಸರಣಿ ವೇಳೆಗೆ ಫಿಟ್ ಆಗಿರಲು ಕ್ರಿಕೆಟ್ ಮಂಡಳಿ ಬಯಸಿದೆ.
ಮೂವರು ಸ್ಪಿನ್ನರ್‌ಗಳ ಅನುಪಸ್ಥಿತಿಯಲ್ಲಿ ಅಮಿತ್ ಮಿಶ್ರಾ ಭಾರತದ ಸ್ಪಿನ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಮಿಶ್ರಾಗೆ ಆಲ್‌ರೌಂಡರ್ ಕೇದಾರ್ ಜಾಧವ್ ಮತ್ತು ಇತರ ಪಾರ್ಟ್‌ಟೈಮ್ ಸ್ಪಿನ್ನರ್‌ಗಳು ಸಾಥ್ ನೀಡಲಿದ್ದಾರೆ
ವೇಗಿ ಮುಹಮ್ಮದ್ ಶಮಿ ಈಗಾಗಲೇ ಗಾಯದ ಕಾರಣದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಶಮಿ ಬದಲಿಗೆ ಇಶಾಂತ್ ಶರ್ಮ ಅವರಿಗೆ ತಂಡದಲ್ಲಿ ಅವಕಾಶ ದೊರೆಯಲಿದೆ. ಇದೇ ವೇಳೆ ಆಶೀಶ್ ನೆಹ್ರಾ ಸೀಮಿತ ಸರಣಿಗೆ ತಂಡದಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ.
ನೆಹ್ರಾ ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಗಾಯದ ಕಾರಣದಿಂದಾಗಿ ತಂಡದಿಂದ ದೂರ ಉಳಿದಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಹಲವು ಮಂದಿ ಆಟಗಾರರು ಗಾಯದ ಕಾರಣದಿಂದಾಗಿ ಅವಕಾಶ ವಂಚಿತಗೊಂಡಿದ್ದರು.
ಆರಂಭಿಕ ದಾಂಡಿಗ ರೋಹಿತ್ ಶರ್ಮ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಿಲ್ಲ. ರೋಹಿತ್ ಅನುಪಸ್ಥಿತಿಯಲ್ಲಿ ಶಿಖರ್ ಧವನ್ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ.
ಚೆನ್ನೈ ಟೆಸ್ಟ್‌ನಲ್ಲಿ ತ್ರಿಶತಕ ದಾಖಲಿಸಿದ್ದ ಕರುಣ್ ನಾಯರ್ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ. ನಾಯರ್ ಝಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದರು.
ಲೊಕೇಶ್ ರಾಹುಲ್ ಚೆನ್ನೈ ಟೆಸ್ಟ್‌ನಲ್ಲಿ 199 ರನ್ ಸಿಡಿಸಿದ್ದರು. ಅವರು ಆರಂಭಿಕ ದಾಂಡಿಗನಾಗಿ ಕಣಕ್ಕಿಳಿಯಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಭಾರತ 3 ಏಕದಿನ ಮತ್ತು 3 ಟ್ವೆಂಟಿ-20 ಪಂದ್ಯಗಳ ಸರಣಿಯನ್ನು ಆಡಲಿದೆ. ನಾಯಕ ಮಹೇಂದ್ರ ಸಿಂಗ್ ಧೋನಿ ಎರಡು ತಿಂಗಳ ವಿರಾಮದ ಬಳಿಕ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.
ಏಕದಿನ ಮತ್ತು ಟ್ವೆಂಟಿ-20 ಸರಣಿಯ ತಯಾರಿಗೆ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಗಳಲ್ಲಿ ಆಡಲು ತಾನು ಲಭ್ಯವಿರುವುದಾಗಿ ಬಿಸಿಸಿಐ ಅಧಿಕಾರಿಗಳಿಗೆ ಧೋನಿ ತಿಳಿಸಿರುವುದಾಗಿ ವರದಿಯಾಗಿದೆ. 35ರ ಹರೆಯದ ಧೋನಿ ಎರಡು ವರ್ಷಗಳ ಹಿಂದೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಆದರೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನಾಯಕರಾಗಿ ಮುಂದುವರಿದಿದ್ದಾರೆ.