ನವಾಝ್‌ಗೆ ಜನ್ಮದಿನ ಶುಭಾಶಯ ಕೋರಿದ ಮೋದಿಗೆ ಶಿವಸೇನೆ ಟೀಕೆ

Update: 2016-12-27 10:35 GMT

ಮುಂಬೈ,ಡಿ.27: ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮುಸುಕಿನ ದಾಳಿಯನ್ನು ನಡೆಸಿರುವ ಮಿತ್ರಪಕ್ಷ ಶಿವಸೇನೆಯು, ಮರಾಠಾ ದೊರೆ ಛತ್ರಪತಿ ಶಿವಾಜಿಯವರು ಎಂದೂ ದೇಶದ ಶತ್ರುಗಳಿಗೆ ಇಂತಹ ಶುಭಾಶಯಗಳನ್ನು ಕೋರಿರಲಿಲ್ಲ ಎಂದು ಹೇಳಿದೆ.

ಮೋದಿಯವರು ಮುಂಬೈಯಲ್ಲಿ ಶಿವಾಜಿ ಮಹಾರಾಜರ ಭವ್ಯ ಸ್ಮಾರಕಕ್ಕೆ ಶಿಲಾನ್ಯಾಸ ನೆರವೇರಿಸಿದ ಮೂರೇ ದಿನಗಳಲ್ಲಿ ಅವರನ್ನು ಶಿವಸೇನೆಯು ಟೀಕಿಸಿರುವುದು ಮಹತ್ವ ಪಡೆದುಕೊಂಡಿದೆ.

ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆಯವರೂ ಉಪಸ್ಥಿತರಿದ್ದ ಬಹಿರಂಗ ಸಭೆಯಲ್ಲಿ ಬಿಜೆಪಿ ಬೆಂಬಲಿಗರಿಂದ ‘ಮೋದಿ,ಮೋದಿ’ ಜಪದ ಬಗ್ಗೆಯೂ ಅದು ಅಸಮಾಧಾನವನ್ನು ವ್ಯಕ್ತಪಡಿಸಿದೆ.

ಸ್ವರಾಜ್ಯದ ಶತ್ರುಗಳನ್ನು ದೇಶದ ಶತ್ರುಗಳೆಂದು ಶಿವಾಜಿ ಮಹಾರಾಜರು ಪರಿಗಣಿಸಿದ್ದರು. ಅವರ ಚಿಂತನೆಗಳ ವೈಶಿಷ್ಟವೇ ಇದು. ಅವರೆಂದೂ ಔರಂಗಝೇಬ್,ಅಫ್ಝಲ್ ಖಾನ್ ಮತ್ತು ಶಾಯಿಸ್ತಾ ಖಾನ್‌ಗೆ ಜನ್ಮದಿನದ ಶುಭಾಶಯಗಳನ್ನು ಕೋರಿರಲಿಲ್ಲ ಎಂದು ಶಿವಸೇನೆಯ ಮುಖವಾಣಿ ‘ಸಾಮನಾ ’ ತನ್ನ ಇಂದಿನ ಸಂಚಿಕೆಯ ಸಂಪಾದಕೀಯ ಲೇಖನದಲ್ಲಿ ಹೇಳಿದೆ.

ಬಿಜೆಪಿಯು ರಾಜಕೀಯ ಲಾಭಗಳಿಕೆಗಾಗಿ ಮರಾಠಾ ದೊರೆಯ ಹೆಸರು ಹೇಳಿಕೊಂಡು ಇಡೀ ಕಾರ್ಯಕ್ರಮವನ್ನೇ ಹೈಜಾಕ್ ಮಾಡುತ್ತಿದೆ ಎಂದು ಸ್ಮಾರಕದ ಶಿಲಾನ್ಯಾಸ ಸಂದರ್ಭ ಸಮುದ್ರ ಪೂಜೆಗೆ ಮುನ್ನ ಶಿವಸೇನೆಯು ಬಹಿರಂಗವಾಗಿಯೇ ಕುಟುಕಿತ್ತು.

ಕೀಳುದರ್ಜೆಯ ರಾಜಕೀಯಕ್ಕಾಗಿ ಛತ್ರಪತಿಯವರನ್ನು ಬಳಸಿಕೊಳ್ಳಬೇಡಿ ಎಂದಷ್ಟೇ ನಾವು ರಾಜಕಾರಣಿಗಳನ್ನು ಕೇಳಿಕೊಳ್ಳುತ್ತಿದ್ದೇವೆ. ಛತ್ರಪತಿಯವರ ಮೇಲೆ ಹಕ್ಕು ಸಾಧಿಸುತ್ತಿರುವವರು ಕೊನೆಯಲ್ಲಿ ಮಣ್ಣು ಮುಕ್ಕುತ್ತಾರೆ ಎಂದು ಅದು ಹೇಳಿದೆ.

   ಸ್ಮಾರಕವು ಸ್ವಾರ್ಥಪರ ರಾಜಕಾರಣದ ಸುಳಿಯಲ್ಲಿ ಸಿಲುಕದಂತೆ ಮತ್ತು ತನ್ಮೂಲಕ ಶಿವಾಜಿ ಮಹಾರಾಜರು ಅನಿವಾರ್ಯವಾಗಿ ಈ ಸ್ವಾರ್ಥಿ ರಾಜಕಾರಣಿಗಳ ವಿರುದ್ಧ ತನ್ನ ಖಡ್ಗವನ್ನು ಬಳಸದಂತೆ ನೋಡಿಕೊಳ್ಳಿ ಎಂದಿದೆ.

  ಆದರೆ,ಬಿಜೆಪಿಯಲ್ಲಿ ಮೋದಿಯವರ ಪ್ರಾಮುಖ್ಯತೆ ಬಗ್ಗೆ ತನಗೆ ಅರಿವಿದೆ. ಕೇವಲ ‘ಮೋದಿ ಟಾನಿಕ್’ನಿಂದಾಗಿ ಆ ಪಕ್ಷವು ಇಂದಿನ ಸ್ಥಾನದಲ್ಲಿದೆ ಎಂದಿರುವ ಸಂಪಾದಕೀಯವು, ಸಮಾರಂಭದಲ್ಲಿ ಶಿವಸೈನಿಕರು ಮತ್ತು ಶಿವಾಜಿ ಅಭಿಮಾನಿಗಳು ಛತ್ರಪತಿಯವರನ್ನು ಹೊಗಳಿ ಘೋಷಣೆಗಳನ್ನು ಮೊಳಗಿಸುತ್ತಿದ್ದರೆ, ಬಿಜೆಪಿ ಕಾರ್ಯಕರ್ತರು ಮೋದಿ ಹೆಸರಿನಲ್ಲಿ ಘೋಷಣೆಗಳನ್ನು ಕೂಗುತ್ತಿದ್ದರು. ಯಾರೇ ಆದರೂ ತನ್ನನ್ನು ಶಿವಾಜಿಯವರಿಗೆ ಹೋಲಿಸಿಕೊಳ್ಳಲು ಸಾಧ್ಯವೇ? ಸ್ವತಃ ಮೋದಿಯವರೂ ಇದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದೆ.

ರವಿವಾರ ನಡೆದ ಬಹಿರಂಗ ಸಭೆಯಲ್ಲಿ ಬಿಜೆಪಿ ಬೆಂಬಲಿಗರ ‘ಮೋದಿ ಮೋದಿ’ ಮಂತ್ರ ಪಠಣದಿಂದ ಉದ್ಧವ ಠಾಕ್ರೆಯವರ ಭಾಷಣಕ್ಕೆ ಅಡ್ಡಿಯುಂಟಾಗಿತ್ತು ಎನ್ನುವುದನ್ನು ಇಲ್ಲಿ ನೆನಪಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News