ಟೀಕೆಗಳ ಹಿನ್ನೆಲೆಯಲ್ಲಿ ಜಯಾ ನಿವಾಸದ ಭದ್ರತೆಗೆ ಪೊಲೀಸರ ಬದಲು ಖಾಸಗಿ ಸೆಕ್ಯೂರಿಟಿ ಗಾರ್ಡ್ ಗಳ ನೇಮಕ
ಚೆನ್ನೈ,ಡಿ.27: ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾರ ನಿಧನದ ಬಳಿಕವೂ ಅವರ ಪೋಯೆಸ್ ಗಾರ್ಡನ್ ನಿವಾಸದ ಭದ್ರತೆಗಾಗಿ ಭಾರೀ ಸಂಖ್ಯೆಯಲ್ಲಿ ಪೊಲೀಸ್ ನಿಯೋಜನೆಯ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದ ನಂತರ ಅಲ್ಲಿದ್ದ ಪೊಲೀಸ್ ಸಿಬ್ಬಂದಿಗಳ ಸಂಖ್ಯೆಯನ್ನು ತೀವ್ರವಾಗಿ ಕಡಿತಗೊಳಿಸಲಾಗಿದೆ. ಪೋಯೆಸ್ ಗಾರ್ಡನ್‌ನ ಜಯಾ ನಿವಾಸ ’ವೇದ ನಿಲಯಂ’ನಲ್ಲಿ ಅವರ ಆಪ್ತಸ್ನೇಹಿತೆಯಾಗಿದ್ದ ವಿ.ಕೆ.ಶಶಿಕಲಾ ವಾಸವಾಗಿದ್ದಾರೆ. ವೇದ ನಿಲಯಂ ಬಳಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಗಳ ಸಂಖ್ಯೆಯನ್ನು ಕಡಿಮೆ ಮಾಡಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಯ ನಿವಾಸಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೋಯೆಸ್ ಗಾರ್ಡನ್‌ಗೆ ಪೊಲೀಸ್ ಭದ್ರತೆಯನ್ನು ಮುಂದುವರಿಸಲಾಗಿತ್ತು.
ಈಗ ಖಾಸಗಿ ಸೆಕ್ಯೂರಿಟಿ ಗಾರ್ಡ್‌ಗಳು ಅಲ್ಲಿ ನೇಮಕಗೊಂಡಿದ್ದಾರೆ,ಹೀಗಾಗಿ ನಮ್ಮವರ ಸಂಖ್ಯೆಯನ್ನು ತೀವ್ರವಾಗಿ ಕಡಿತಗೊಳಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು. ಆದರೆ ಇನ್ನೂ ಎಷ್ಟು ಪೊಲೀಸರು ಅಲ್ಲಿ ನಿಯೋಜನೆಯಲ್ಲಿದ್ದಾರೆ ಎನ್ನುವುದನ್ನು ತಿಳಿಸಲು ಅವರು ನಿರಾಕರಿಸಿದರು.
ಸಾಂವಿಧಾನಿಕ ಹುದ್ದೆಯಲ್ಲಿರುವ ಅಥವಾ ಹೈ-ರಿಸ್ಕ್ ವರ್ಗದ ಯಾವುದೇ ವ್ಯಕ್ತಿ ಈಗ ವೇದ ನಿಲಯಂನಲ್ಲಿ ವಾಸವಿಲ್ಲ, ಹೀಗಾಗಿ ಅಲ್ಲಿ ನಿಯೋಜಿತ ಪೊಲೀಸರನ್ನು ಹಿಂದೆಗೆದುಕೊಳ್ಳಬೇಕು ಎಂದು ಡಿಎಂಕೆ ಖಜಾಂಚಿ ಹಾಗೂ ಪ್ರತಿಪಕ್ಷ ನಾಯಕ ಎ.ಕೆ ಸ್ಟಾಲಿನ್ ಕೆಲವು ದಿನಗಳ ಹಿಂದೆ ಆಗ್ರಹಿಸಿದ್ದರು.