ಬಿಎಸ್ಪಿಯ ಠೇವಣಿಗೆ ಪೈಸೆ ಪೈಸೆ ಲೆಕ್ಕವಿದೆ: ಮಾಯಾವತಿ
ಹೊಸದಿಲ್ಲಿ, ಡಿ.27: ನೋಟು ರದ್ದತಿಯ ಬಳಿಕ ತನ್ನ ಪಕ್ಷದ ಖಾತೆಯಲ್ಲಿ ಠೇವಣಿ ಇರಿಸಲಾಗಿರುವ ರೂ.100 ಕೋಟಿಗೂ ಹೆಚ್ಚು ಮೊತ್ತದ ಹಣಕ್ಕೆ ಪೈಸೆ ಪೈಸೆ ಲೆಕ್ಕ ತಮ್ಮಲ್ಲಿದೆಯೆಂದು ಬಿಎಸ್ಪಿ ವರಿಷ್ಠ ಮಾಯಾವತಿ ಇಂದು ಪ್ರತಿಪಾದಿಸಿದ್ದಾರೆ. ಉತ್ತರಪ್ರದೇಶದ ನಿರ್ಣಾಯಕ ಚುನಾವಣೆಗೆ ಮುನ್ನ ತನ್ನ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಲು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅಧಿಕಾರದ ದುರುಪಯೋಗ ಮಾಡುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.
ಹಣವು ಪಕ್ಷಕ್ಕೆ ಸೇರಿದುದಾಗಿದೆ. ಸೂಕ್ತ ಪ್ರಕ್ರಿಯೆಯ ಬಳಿಕವೇ ಅದನ್ನು ಠೇವಣಿಯಿರಿಸಲಾಗಿದೆ. ತಾವು ಬ್ಯಾಂಕ್‌ನಲ್ಲಿರಿಸಿರುವ ಪ್ರತಿ ರೂಪಾಯಿಗೂ ತಮ್ಮಲ್ಲಿ ಲೆಕ್ಕವಿದೆ. ಆದರೆ ಬಿಜೆಪಿಯ ಠೇವಣಿಗಳಿಗಿದೆಯೇ? ಎಂದು ಪ್ರಶ್ನಿಸಿರುವ ಮಾಯಾವತಿ, ಬಿಜೆಪಿಯ ಬ್ಯಾಂಕ್ ಠೇವಣಿಗಳನ್ನು ಬಹಿರಂಗಪಡಿಸುವಂತೆ ಪ್ರಧಾನಿ ಮೋದಿಯವರಿಗೆ ಸವಾಲು ಹಾಕಿದ್ದಾರೆ.
ಅವರಿಗೆ ಪ್ರಾಮಾಣಿಕತೆ ಹಾಗೂ ವಿಧೇಯತೆ ಇರುವುದೇ ಹೌದಾದರೆ ಬಿಜೆಪಿಯ ಯಾವುದೇ ದೊಡ್ಡ ಖರ್ಚು, ಠೇವಣಿಗಳ ಹೇಳಿಕೆಗಳು ಹಾಗೂ ವೆಚ್ಚಗಳನ್ನು ಬಹಿರಂಗಪಡಿಸುವಂತೆ ತಾನು ಪ್ರಧಾನಿಗೆ ಹೇಳಲಿಚ್ಛಿಸುತ್ತೇನೆ. ಅದೆಲ್ಲವೂ ಬಹಿರಂಗವಾಗಲಿ ಎಂದು ಲಕ್ನೊದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯೊಂದರಲ್ಲಿ ಅವರು ಹೇಳಿದ್ದಾರೆ.
ನೋಟು ರದ್ದತಿಯ ಬಳಿಕ 7 ವಾರಗಳಲ್ಲಿ ಯೂನಿಯನ್ ಬ್ಯಾಂಕ್‌ನಲ್ಲಿರುವ ಬಿಎಸ್ಪಿಯ ಖಾತೆಗೆ ಸುಮಾರು ರೂ.104 ಕೋಟಿ ಜಮೆಯಾಗಿದೆ. ಅದೇ ಬ್ಯಾಂಕ್‌ನಲ್ಲಿ ಮಾಯಾವತಿಯವರ ಸೋದರ ಆನಂದ ಕುಮಾರ್ ಎಂಬವರ ಖಾತೆಯಲ್ಲಿ ರೂ.1.43 ಕೋಟಿ ಠೇವಣಿಯಿರಿಸಲಾಗಿದೆಯೆಂದು ಜಾರಿ ನಿರ್ದೇಶನಾಲಯದ ಮೂಲಗಳು ಬಹಿರಂಗಪಡಿಸಿದ್ದವು.
ತಮ್ಮ ಪಕ್ಷವು ಶೀಘ್ರವೇ ನಡೆಯಲಿರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಾಗಿ ಬೆಂಬಲಿಗರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾಗಲೇ ನೋಟು ನಿಷೇಧವನ್ನು ಘೋಷಿಸಲಾಯಿತು ಪಕ್ಷದ ಬಳಿಯಿದ್ದ ಹಳೆಯ ನೋಟುಗಳನ್ನು ಸೂಕ್ತ ಪ್ರಕ್ರಿಯೆ ನಡೆಸಿ ಠೇವಣಿಯಿರಿಸಲಾಗಿದೆ. ಲೆಕ್ಕವನ್ನು ಸ್ವತಃ ಪರಿಶೀಲಿಸಿದ್ದೇನೆ ಎಂದ ಮಾಯಾವತಿ, ಮತ್ತೆ ಹಳೆಯ ನೋಟುಗಳನ್ನು ತಾವು ಎಸೆಯಬೇಕಿತ್ತೇ ಎಂದು ಪ್ರಶ್ನಿಸಿದ್ದಾರೆ.
ತನ್ನ ಸೋದರನ ವಿರುದ್ಧ ಆರೋಪವನ್ನು ತಳ್ಳಿಹಾಕಿರುವ ಅವರು, ಆತನಿಗೆ ವ್ಯಾಪಾರವಿದೆ. ಆದಾಯ ತೆರಿಗೆ ನಿಯಮದಂತೆಯೇ ಆತ ಬ್ಯಾಂಕ್‌ಖಾತೆಯಲ್ಲಿ ಹಣ ಠೇವಣಿಯಿರಿಸಿದ್ದಾರೆಂದು ಹೇಳಿದ್ದಾರೆ.