×
Ad

ನೋಟು ರದ್ದತಿಯಿಂದ ಭಯೋತ್ಪಾದನೆ ನಿಧಿ, ಮಾನವ-ಮಾದಕ ದ್ರವ್ಯ ಸಾಗಾಟ ನಾಶ: ಪ್ರಧಾನಿ

Update: 2016-12-27 19:50 IST

ಡೆಹ್ರಾಡೂನ್, ಡಿ.27: ದೊಡ್ಡ ಕಾರ್ಪೊರೇಟ್‌ಗಳು ಹಾಗೂ ಶ್ರೀಮಂತರಿಗೆ ನೆರವಾಗುತ್ತಿದೆಯೆಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಆರೋಪಕ್ಕೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ತನ್ನ ಸರಕಾರವು ಬಡವರ ಕುರಿತು ಕೆಲಸ ಮಾಡುತ್ತಿದೆ ಎಂದು ಮಂಗಳವಾರ ತಿಳಿಸಿದ್ದು, ನೋಟು ರದ್ದತಿಯು ಒಂದೇ ಏಟಿಗೆ ಕಪ್ಪುಹಣ, ಭಯೋತ್ಪಾದನೆ ನಿಧಿ ಹಾಗೂ ಮಾನವ ಮತ್ತು ಮಾದಕ ದ್ರವ್ಯ ಕಳ್ಳ ಸಾಗಣೆಗಳನ್ನು ನಾಶಗೊಳಿಸಿದೆಯೆಂದು ಒತ್ತಿ ಹೇಳಿದ್ದಾರೆ.

ನೋಟು ನಿಷೇಧವನ್ನು ವಿರೋಧಿಸುತ್ತಿರುವ ಪಕ್ಷಗಳತ್ತ ಬಂದೂಕು ಚಾಚಿದ ಪ್ರಧಾನಿ, ತನ್ನ ನಿರ್ಧಾರವು ‘ಕಳ್ಳರ ಗುಂಪಿನ ನಾಯಕನಿಗೆ’ ನಾಟಿಕೊಂಡುದರಿಂದ ಕೆಲವು ಜನರು ಹತಾಶರಾಗಿದ್ದಾರೆಂದು ಟೀಕಿಸಿದ್ದಾರೆ.

ಚುನಾವಣಾ ಹೊಸ್ತಿಲಲ್ಲಿರುವ ಉತ್ತರಾಖಂಡದಲ್ಲಿ ಬಿಜೆಪಿಯ ‘ಪರಿವರ್ತನ ಮಹಾರ್ಯಾಲಿಯಲ್ಲಿ’ ಮಾತನಾಡುತ್ತಿದ್ದ ಅವರು, ಸಬ್ಸಿಡಿ ಗ್ಯಾಸ್ ಸಿಲಿಂಡರ್‌ಗಳ ಸಂಖ್ಯೆಯನ್ನು 9ರಿಂದ 12ಕ್ಕೇರಿಸಿದ ಹಿಂದಿನ ಯುಪಿಎ ಸರಕಾರದ ಕ್ರಮವನ್ನು ಸ್ಮರಣೀಯವೆಂದು ಬಿಂಬಿಸಲಾಗಿತ್ತು. ಆದರೆ, ತನ್ನ ಸರಕಾರವು ಬಡತನ ರೇಖೆಗಿಂತ ಕೆಳಗಿರುವ 5 ಕೋಟಿ ಜನರಿಗೆ ಗ್ಯಾಸ್ ಸಿಲಿಂಡರ್‌ಗಳನ್ನು ನೀಡಿದೆ ಎನ್ನುವ ಮೂಲಕ ರಾಹುಲ್‌ರ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

18 ಸಾವಿರ ಗ್ರಾಮಗಳು ವಿದ್ಯುತ್ ಸೌಲಭ್ಯವಿಲ್ಲದೆ 18ನೆ ಶತಮಾನದಲ್ಲೇ ಜೀವಿಸುತ್ತಿದ್ದರು. ಒಂದು ಸಾವಿರ ದಿನಗಳಲ್ಲಿ ತಾವು 12 ಸಾವಿರ ಗ್ರಾಮಗಳಿಗೆ ವಿದ್ಯುತ್ ಒದಗಿಸಿದ್ದೇವೆ. ಉಳಿದ 6 ಸಾವಿರ ಗ್ರಾಮಗಳಲ್ಲಿ ಕೆಲಸ ಪ್ರಗತಿಯಲ್ಲಿದೆ. ಇದು ಶ್ರೀಮಂತರಿಗಾಗಿ ಮಾಡಿದ ಕೆಲಸವೇ ಅಥವಾ ಬಡವರ ಸಬಲೀಕರಣವೇ? ಎಂದು ಮೋದಿ ಪ್ರಶ್ನಿಸಿದ್ದಾರೆ.

ರೂ.500 ಹಾಗೂ 1000ದ ನೋಟು ರದ್ದತಿಯ ನಿರ್ಧಾರದಿಂದ ಕಪಾಟು, ಜಮಖಾನೆಗಳಡಿ ಶೇಖರಿಸಿದ್ದ ಕಪ್ಪುಹಣ ಈಗ ಬ್ಯಾಂಕ್‌ಗಳಿಗೆ ಹಾಗೂ ಜನರಿಗೆ ಬರಲಾರಂಭಿಸಿದೆ. ತಾನು ದೇಶವನ್ನು ನಾಶಗೊಳಿಸಿರುವ ಕಪ್ಪು ಹಣ ಹಾಗೂ ‘ಕಪ್ಪು ಹೃದಯಗಳಿಂದ’ ಮುಕ್ತಿ ಪಡೆಯಲು ಚೌಕಿದಾರನ(ಕಾವಲುಗಾರ) ತನ್ನ ಕರ್ತವ್ಯವನ್ನು ಈಡೇರಿಸುತ್ತಿದ್ದೇನೆಂದು ಪ್ರಧಾನಿ ಹೇಳಿದ್ದಾರೆ.

ಕೆಲವರಿಗೆ ಭ್ರಷ್ಟಾಚಾರ ರಕ್ತದಲ್ಲಿಯೇ ಇದೆ. ಅವರು, ಹಣ ಪರಿವರ್ತನೆಗೆ ಹಿಂಬಾಗಿಲನ್ನು ಉಪಯೋಗಿಸಿದ್ದರು ಹಾಗೂ ಮೋದಿಗೆ ತಿಳಿಯದೆಂದು ಭಾವಿಸಿದ್ದರು. ಆದರೆ, ತಮಗೆ ತಿಳಿದಿತ್ತು ಹಾಗೂ ಅವರೀಗ ಹಿಡಿಯಲ್ಪಡುತ್ತಿದ್ದಾರೆಂದು ಕಪ್ಪುಕುಳಗಳ ವಿರುದ್ಧ ಕಾನೂನು ಜಾರಿ ಸಂಸ್ಥೆಗಳ ಇತ್ತೀಚಿನ ದಾಳಿಗಳನ್ನುಲ್ಲೇಖಿಸಿ ಅವರು ತಿಳಿಸಿದ್ದಾರೆ.

ನೋಟು ರದ್ದತಿಯನ್ನು ಸ್ವಚ್ಛತಾ ಆಂದೋಲನವೆಂದು ಬಣ್ಣಿಸಿದ ಅವರು, ತನಗೆ ಬೆಂಬಲವಾಗಿ ನಿಂತ ಜನರಿಗೆ ಕೃತಜ್ಞತೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News