ದಲಿತನ ಪುತ್ರಿಯಾಗಿರುವುದು ಭ್ರಷ್ಟಾಚಾರಕ್ಕೆ ಲೈಸನ್ಸ್ ಅಲ್ಲ: ಪಾಸ್ವಾನ್
ಹೊಸದಿಲ್ಲಿ,ಡಿ.27: ಬಿಎಸ್‌ಪಿ ವಿರುದ್ಧ ಜಾರಿ ನಿರ್ದೇಶನಾಲಯದ ಕ್ರಮಕ್ಕೂ ತಾನು ದಲಿತೆಯಾಗಿರುವುದಕ್ಕೂ ನಂಟು ಕಲ್ಪಿಸಿರುವುದಕ್ಕಾಗಿ ಮಾಯಾವತಿ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ರಾಮ್ ವಿಲಾಸ ಪಾಸ್ವಾನ್ ಅವರು, ಬಿಎಸ್‌ಪಿ ನಾಯಕಿಯ ದಲಿತ ಮೂಲವು ಅವರಿಗೆ ಭ್ರಷ್ಟಾಚಾರವನ್ನು ನಡೆಸಲು‘ಲೈಸನ್ಸ್’ ನೀಡುವುದಿಲ್ಲ ಮತ್ತು ಕಾನೂನು ತನ್ನ ದಾರಿಯಲ್ಲಿ ಸಾಗಲು ಅವರು ಅವಕಾಶ ನೀಡಬೇಕು ಎಂದು ಇಂದಿಲ್ಲಿ ಹೇಳಿದರು.
ಬಿಜೆಪಿ ನೇತೃತ್ವದ ಎನ್‌ಡಿಎದಲ್ಲಿ ಪ್ರಮುಖ ದಲಿತ ಮುಖವಾಗಿರುವ ಪಾಸ್ವಾನ್ ನೋಟು ರದ್ದತಿಯ ಬಳಿಕ ಬಿಎಸ್‌ಪಿಯ ಬ್ಯಾಂಕ್ ಖಾತೆಯಲ್ಲಿ 104 ಕೋ.ರೂ.ಠೇವಣಿ ಕುರಿತಂತೆ ಮಾಯಾವತಿ ಅವರನ್ನು ತರಾಟೆಗೆತ್ತಿಕೊಂಡರು. ಸಮಾಜದ ಅತ್ಯಂತ ಶೋಷಿತ ವರ್ಗಗಳ ಪ್ರತಿನಿಧಿಯೆಂದು ಹೇಳಿಕೊಳ್ಳುತ್ತಿರುವ ಪಕ್ಷವೊಂದು ಇಷ್ಟೊಂದು ಭಾರೀ ಮೊತ್ತದ ಹಣ ಹೊಂದಿರುವುದು ಆಘಾತಕಾರಿಯಾಗಿದೆ ಎಂದರು.
ನನ್ನ ಪಕ್ಷ ಎಲ್‌ಜೆಪಿ ದಲಿತರಿಗಾಗಿ ಕೆಲಸ ಮಾಡುತ್ತಿದೆ. ನಾವು ಆರು ಲೋಕಸಭಾ ಸದಸ್ಯರನ್ನು ಹೊಂದಿದ್ದೇವೆ ಮತ್ತು ಪಕ್ಷದ ಬ್ಯಾಂಕ್ ಖಾತೆಯಲ್ಲಿರುವ ಒಟ್ಟು ಹಣ 1,03,198 ರೂ.ಮಾತ್ರ ಎಂದು ಸುದ್ದಿಗಾರರೊಡನೆ ಮಾತನಾಡಿದ ಪಾಸ್ವಾನ್ ಹೇಳಿದರು.
ನೋಟು ರದ್ದತಿಗೆ ಮಾಯಾವತಿಯವರ ತೀವ್ರ ವಿರೋಧವನ್ನು ಅಣಕಿಸಿದ ಅವರು, ಬಿಎಸ್‌ಪಿ ಮುಖ್ಯಸ್ಥೆ ಮತ್ತು ಆರ್‌ಜೆಡಿ ವರಿಷ್ಠ ಲಾಲೂಪ್ರಸಾದ್ ಅಂತಹವರು ಯಾಕೆ ಸರಕಾರದ ಕ್ರಮದ ಕಟು ಟೀಕಾಕಾರರಾಗಿದ್ದಾರೆ ಎನ್ನುವುದು ಈಗ ಸ್ಪಷ್ಟವಾಗಿದೆ ಎಂದರು.
ಮಾಯಾವತಿ ಸೋದರನ ಬ್ಯಾಂಕ್ ಖಾತೆಯಲ್ಲಿರುವ 1.43 ಕೋ.ರೂ.ಠೇವಣಿಯನ್ನು ಪ್ರಸ್ತಾಪಿಸಿದ ಪಾಸ್ವಾನ್, ಅವರು ಈ ಹಣದ ಮೂಲವನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ಆಗ್ರಹಿಸಿದರು.