ಸೂಪರ್ ಹಿಟ್ ದಂಗಲ್ ನ ಹೊಸ ಆವೃತ್ತಿ ಬಿಡುಗಡೆ !
ಮುಂಬೈ, ಡಿ.29 : ಆಮಿರ್ ಖಾನ್ ಅವರ ದಂಗಲ್‌ಚಿತ್ರ ವಿಮರ್ಶಕರಿಂದ ಭಾರೀ ಪ್ರಶಂಸೆ ಪಡೆಯುತ್ತಿದ್ದು ಈ ವರ್ಷದ ಸೂಪರ್ ಹಿಟ್ ಚಿತ್ರವಾಗುವತ್ತ ದಾಪುಗಾಲಿಕ್ಕುತ್ತಿದೆ. ದಂಗಲ್ ಚಿತ್ರ ಪ್ರದರ್ಶನವಿರುವ ಎಲ್ಲಾ ಚಿತ್ರಮಂದಿರಗಳೂ ಹೌಸ್ ಫುಲ್. ಆದರೆ ಇತ್ತೀಚೆಗೆ ಖಂಡಾಲದಲ್ಲಿರುವ 60 ಸೀಟುಗಳ ಚಿತ್ರ ಮಂದಿರವೊಂದು ದಂಗಲ್ ಪ್ರದರ್ಶಿಸುತ್ತಿದ್ದರೂ ಖಾಲಿ ಖಾಲಿಯಾಗಿತ್ತು. ಆ ಚಿತ್ರಮಂದಿರದಲ್ಲಿ ಕೇವಲ ಇಬ್ಬರು ಮಾತ್ರ ಚಿತ್ರ ವೀಕ್ಷಿಸುತ್ತಿದ್ದರು, ಅವರೇ ಖ್ಯಾತ ಚಿತ್ರ ನಿರ್ಮಾಪಕ ರಾಕೇಶ್ ರೋಶನ್ ಮತ್ತವರ ಪಾರ್ಸಿ ಸ್ನೇಹಿತರೊಬ್ಬರು. ದಂಗಲ್ ಚಿತ್ರವನ್ನು ಸಂಪೂರ್ಣವಾಗಿ ಯಾವುದೇ ಅಡೆತಡೆಯಿಲ್ಲದೆ ಆನಂದಿಸುವ ಸಲುವಾಗಿ ರಾಕೇಶ್ ರೋಶನ್ ಇಡೀ ಚಿತ್ರಮಂದಿರದ ಟಿಕೆಟ್ಟುಗಳನ್ನು ಖರೀದಿಸಿ ದಂಗಲ್ ಆನಂದಿಸಿದ್ದರು.
ನಂತರ ಅವರು ಆಮಿರ್ ಖಾನ್ ಅವರಿಗೆ ಫೋನ್ ಮಾಡಿ ಚಿತ್ರವನ್ನು ಹೊಗಳಿದ್ದೇ ಹೊಗಳಿದ್ದು. ಚಿತ್ರದಲ್ಲಿ ಮಹಾವೀರ್ ಫೋಗಟ್ ಆಗಿ ಅಭಿನಯಿಸಿದ ಆಮಿರ್ ಅವರ ಅಭಿನಯವನ್ನು ಹಾಗೂ ಅವರ ಪುತ್ರಿಯರಾಗಿ ಅಭಿನಯಿಸಿದ್ದ ಸಾನ್ಯ ಮಲ್ಹೋತ್ರ, ಫಾತಿಮಾ ಸನಾ ಶೇಖ್ ಅವರ ಅಭಿನಯವನ್ನೂ ಅವರು ಕೊಂಡಾಡಿದರು.
ದಂಗಲ್ ಹೊಸ ಆವೃತ್ತಿ ಬಿಡುಗಡೆ !
ದಂಗಲ್ ಚಿತ್ರದ 360 ಡಿಗ್ರಿ ವೀಡಿಯೊವೊಂದನ್ನು ಯೂಟ್ಯೂಬ್ ನಲ್ಲಿ ಬಿಡುಗಡೆಗೊಳಿಸಲಾಗಿದ್ದು ಇದು ವರ್ಚುವಲ್ ರಿಯಾಲಿಟಿ ಅನುಭವವನ್ನು ವೀಕ್ಷಕರಿಗೆ ಒದಗಿಸಲಿದೆ. ವೀಡಿಯೊ ನೋಡಿದಾಗ ನೇರವಾಗಿ ಸೆಟ್ ನಲ್ಲಿ ಕುಳಿತುಕೊಂಡು ವೀಕ್ಷಿಸುವ ಅನುಭವವಾಗುತ್ತದೆಯೆಂದು ಹೇಳಲಾಗಿದೆ.
ಎಲ್ಲಾ ಕೋನಗಳಿಂದಲೂ ವೀಡಿಯೊ ರೆಕಾರ್ಡಿಂಗ್ ಮಾಡುವ ತಂತ್ರಜ್ಞಾನ ಉಪಯೋಗಿಸಿ ವೀಡಿಯೊ ತಯಾರಿಸಲಾಗಿದ್ದು,ಚಿತ್ರದ ಈ ಮೇಕಿಂಗ್ ವೀಡಿಯೊ ಡಿಸೆಂಬರ್ 22ರಂದೇ ಬಿಡುಗಡೆಯಾಗಿದ್ದು ಇಲ್ಲಿಯ ತನಕ 12 ಲಕ್ಷ 86 ಸಾವಿರ ಮಂದಿ ಅದನ್ನು ವೀಕ್ಷಿಸಿದ್ದಾರೆ.