ಪಾಕಿಸ್ತಾನದ ಸೈಬರ್‌ಸ್ಪೇಸ್ ಮೇಲೆ ಕೇರಳದ ‘ಸೈಬರ್ ಯೋಧ ’ರಿಂದ ‘ಸರ್ಜಿಕಲ್ ದಾಳಿ’
ತಿರುವನಂತಪುರಂ,ಡಿ.29: ನಿನ್ನೆ ತಿರುವನಂತಪುರ ವಿಮಾನ ನಿಲ್ದಾಣದ ವೆಬ್‌ಸೈಟ್‌ನ್ನು ಹ್ಯಾಕ್ ಮಾಡಿದ್ದ ಪಾಕಿಸ್ತಾನಿ ಸೈಬರ್ ದಾಳಿಕೋರರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ನೀಡಿರುವ ಕೇರಳದ ಸೈಬರ್ ತಜ್ಞರ ಗುಂಪು ‘ಮಲ್ಲು ಸೈಬರ್ ಸೋಲ್ಜರ್ಸ್’ ಪಾಕಿಸ್ತಾನದ ಪಂಜಾಬ್ ಪ್ರಾಂತದ ಸಿಯಾಲಕೋಟ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ವೆಬ್ ಸೈಟ್‌ನ್ನು ಹ್ಯಾಕ್ ಮಾಡುವ ಮೂಲಕ ಪಾಕಿಸ್ತಾನದ ಸೈಬರ್‌ಸ್ಪೇಸ್ ಮೇಲೆ ಸರ್ಜಿಕಲ್ ದಾಳಿಯನ್ನು ಮಾಡಿದ್ದಾರೆ. ಇಷ್ಟಕ್ಕೇ ತೃಪ್ತರಾಗದ ಈ ಸೈಬರ್ ಯೋಧರು, ಲಾಗಿನ್ ಆಗುವಂತೆ ಮತ್ತು ಆ ವೆಬ್‌ಸೈಟ್‌ನ್ನು ಮೇಲೆ ಪದೇಪದೇ ಹೈಜಾಕ್ ಮಾಡುವಂತೆ ಇತರರನ್ನೂ ಆಹ್ವಾನಿಸಿದ್ದಾರೆ.
ಕೇರಳದ ವಿವಿಧ ಸ್ಥಳಗಳಲ್ಲಿ ಹರಡಿಕೊಂಡಿರುವ ಮಲ್ಲು ಸೈಬರ್ ಯೋಧರು ಸಿಯಾಲ್‌ಕೋಟ್ ವಿಮಾನ ನಿಲ್ದಾಣದ ವೆಬ್‌ಸೈಟ್‌ನ ಲಾಗಿನ್ ಮಾಹಿತಿಗೆ ಕನ್ನ ಹಾಕಿ, ಪಾಸ್‌ವರ್ಡ್‌ನ್ನು ‘ಮಲಯಾಳೀಸ್ ’ಎಂದು ಬದಲಿಸಿದ್ದಲ್ಲದೆ, ಹೊಸ ಲಾಗಿನ್ ವಿವರಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾರೆ.
ಈ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಚೋದನಾತ್ಮಕ ಟೀಕೆಗಳನ್ನು ಮಾಡಲು ಬಳಸಬಹುದಾದ ಇಂಟರ್‌ನೆಟ್ ಬಳಕೆದಾರರು ಅಥವಾ ‘ಟ್ರೋಲ್ ’ಗಳಿಗೆ ಮಲ್ಲು ಸೈಬರ್ ಯೋಧರು ಕೆಲವು ಕಿವಿಮಾತುಗಳನ್ನೂ ಹೇಳಿದ್ದಾರೆ.
ಇತರರೂ ತಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸಲಿ, ಹೀಗಾಗಿ ಪಾಸ್‌ವರ್ಡ್‌ನ್ನು ಬದಲಿಸಬೇಡಿ ಎಂದು ಅವರು ಟ್ರೋಲ್‌ಗಳಿಗೆ ಸೂಚಿಸಿದ್ದಾರೆ.
ಮಲ್ಲು ಸೈಬರ್ ಯೋಧರು ತಮ್ಮ ಕೈಚಳಕದ ಸ್ಕ್ರೀನ್ ಶಾಟ್‌ನ್ನೂ ತೆಗೆದು ಅದನ್ನು ತಮ್ಮ ಫೇಸ್‌ಬುಕ್ ಗುಂಪಿನಲ್ಲಿ ಪೋಸ್ಟ್ ಮಾಡಿದ್ದಾರೆ.