ಇಲ್ಲಿದೆ ಈ ವರ್ಷದ ಅತ್ಯುತ್ತಮ ಚಿತ್ರ, ಕಲಾವಿದರ ರಿಯಲ್ ಪಟ್ಟಿ
ಮುಂಬೈ,ಡಿ.29: ಅಬ್ಬರದ ಪ್ರದರ್ಶನಗಳನ್ನು ಕಾಣುತ್ತಿರುವ ಅಮೀರ್ ಖಾನ್ ಅವರ ಕುಸ್ತಿಪಟುವಿನ ಜೀವನ ಕಥನದ ದೃಶ್ಯಕಾವ್ಯ ‘ದಂಗಾಲ್’ ಬಾಕ್ಸ್ ಆಫೀಸ್‌ನ್ನು ಕೊಳ್ಳೆ ಹೊಡೆಯುವ ಜೊತೆಗೆ ವಿಮರ್ಶಕರ ಹೊಗಳಿಕೆಗೂ ಪಾತ್ರವಾಗಿದೆ. ಪ್ರಮುಖ ಚಲನಚಿತ್ರ ವಿಮರ್ಶಕರು ‘ದಂಗಾಲ್’ಗೆ 2016ನೇ ಸಾಲಿನ ಅತ್ಯುತ್ತಮ ಚಿತ್ರವೆಂದು ಪಟ್ಟ ಕಟ್ಟಿದ್ದಾರೆ.
‘ಫಿಲ್ಮ್ ಕಂಪ್ಯಾನಿಯನ್ ಕ್ರಿಟಿಕ್ಸ್ ಪೋಲ್ ’ಮೂಲಕ ಸಮೀಕ್ಷೆಯನ್ನು ನಡೆಸಿ ಬಾಲಿವುಡ್‌ನ ಶ್ರೇಷ್ಠರನ್ನು ಆಯ್ಕೆ ಮಾಡಲು 23 ವಿಮರ್ಶಕರು ಒಟ್ಟಾಗಿದ್ದರು. ವಿಮರ್ಶಕಿ ಅನುಪಮಾ ಚೋಪ್ರಾ ಅವರ ಪ್ರಮುಖ ಬೆಂಬಲ ಹೊಂದಿರುವ ವೇದಿಕೆಯಾಗಿರುವ ಫಿಲ್ಮ್ ಕಂಪ್ಯಾನಿಯನ್ ವರ್ಷಾಂತ್ಯದಲ್ಲಿ ತನ್ನ ಮೊದಲ ಸಮೀಕ್ಷೆಯನ್ನು ಕೈಗೊಂಡಿತ್ತು. ಐದು ವರ್ಗಗಳಲ್ಲಿ ಸಮೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.
ಅತ್ಯುತ್ತಮ ಚಿತ್ರವಾಗಿ ‘ದಂಗಾಲ್’ ಹೆಸರಿಸಲ್ಪಟ್ಟಿದ್ದರೆ ತನ್ನ ಚೊಚ್ಚಲ ನಿರ್ದೇಶನದ ಚಿತ್ರ ‘ನೀರಜಾ’ಕ್ಕಾಗಿ ರಾಮ ಮಾಧ್ವಾನಿ ಅವರು ಅತ್ಯುತ್ತಮ ನಿರ್ದೇಶಕ ಪಟ್ಟಕ್ಕೆ ಪಾತ್ರರಾಗಿದ್ದಾರೆ.
‘ಅಲಿಗಡ’ ಚಿತ್ರದಲ್ಲಿ ಸಲಿಂಗಕಾಮಿ ಪ್ರೊಫೆಸರ್ ಶ್ರೀನಿವಾಸ ರಾಮಚಂದ್ರ ಸಿರಸ್ ಪಾತ್ರಕ್ಕಾಗಿ ಮನೋಜ ಬಾಜಪೇಯಿ ಅತ್ಯುತ್ತಮ ನಟನೆಂದು ಪುರಸ್ಕೃತರಾಗಿದ್ದಾರೆ.
‘ಉಡ್ತಾ ಪಂಜಾಬ್’ ಮತ್ತು ‘ಡಿಯರ್ ಜಿಂದಗಿ’ಯಂತಹ ಚಿತ್ರಗಳಲ್ಲಿ ತನ್ನ ನಟನಾ ಕೌಶಲವನ್ನು ಮೆರೆದಿರುವ ಆಲಿಯಾ ಭಟ್ ಅತ್ಯುತ್ತಮ ನಟಿ ಎಂದು ಆಯ್ಕೆಯಾಗಿದ್ದಾರೆ.
‘ಕಪೂರ್ ಆ್ಯಂಡ್ ಸನ್ಸ್’ ಚಿತ್ರಕ್ಕಾಗಿ ಶಕುನ್ ಬಾತ್ರಾ ಮತ್ತು ಆಯೇಶಾ ದಿವಿತ್ರೆ ಧಿಲ್ಲಾನ್ ಅವು ಅತ್ಯುತ್ತಮ ಲೇಖಕರು ಗೌರವಕ್ಕೆ ಪಾತ್ರರಾಗಿದ್ದಾರೆ.