×
Ad

ವಿಶ್ವದ ಅತಿ ಚಿಕ್ಕ ಹಾರರ್ ಸ್ಟೋರಿ-‘ಮಿತ್ರೋಂ’ !

Update: 2016-12-29 17:18 IST

ಹೊಸದಿಲ್ಲಿ,ಡಿ.29: ನ.8ರಂದು ಟಿವಿಯಲ್ಲಿ ದೇಶವನ್ನುದೇಶಿಸಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 50 ದಿನಗಳ ಕಾಲ ಸಹನೆಯಿಂದಿರುವಂತೆ ದೇಶದ ಪ್ರಜೆಗಳನ್ನು ಕೇಳಿಕೊಂಡಿದ್ದರಲ್ಲದೆ,ನೋಟು ರದ್ದತಿಯ ಬಳಿಕ ಜನರು ಎದುರಿಸುವ ತೊಂದರೆಗಳು ಉತ್ತಮ ಫಲವನ್ನು ನೀಡಲಿವೆ ಎಂದು ಭರವಸೆ ನೀಡಿದ್ದರು. ನೋಟು ರದ್ದತಿಯ ನೋವು ದೇಶದಲ್ಲಿಯ ಕೆಲವೇ ಜನರನ್ನು ಹೊರತುಪಡಿಸಿ ಇತರ ಎಲ್ಲರಿಗೂ ಅನುಭವವಾಗತೊಡಗಿದಾಗ ಮೋದಿ ಭಾಷಣವನ್ನು ‘ಹಾರರ್ ಸ್ಟೋರಿ ’ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಣ್ಣಿಸಲಾಗಿತ್ತು.

‘ಮಿತ್ರೋಂ’ ಎಂದು ಆರಂಭವಾಗುವ ಇನ್ನೊಂದು ಹಾರರ್ ಸ್ಟೋರಿ ಸದ್ಯವೇ ಕೇಳಿ ಬರಲಿದೆಯೇ?

 ಹಳೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಜಮೆ ಮಾಡಲು ನೀಡಲಾಗಿದ್ದ ಗಡುವು ಡಿ.30ರಂದು ಅಂತ್ಯಗೊಳ್ಳುತ್ತಿದೆ. ಗಡುವು ಮುಗಿದ ಮರುದಿನ ಅಂದರೆ ಡಿ.31ರಂದು ಸಂಜೆ 7:30ಕ್ಕೆ ಮೋದಿ ದೇಶವನ್ನುದ್ದೇಶಿಸಿ ಇನ್ನೊಂದು ಟಿವಿ ಭಾಷಣ ಮಾಡುವ ಸಾಧ್ಯತೆಯಿದೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿವೆ.

ಮೋದಿ ತನ್ನ ಈ ಭಾಷಣದಲ್ಲಿ 2017ರಲ್ಲಿ ತನ್ನ ಸರಕಾರವು ಭ್ರಷ್ಟಾಚಾರದ ವಿರುದ್ಧ ಕೈಗೊಳ್ಳಲಿರುವ ಇನ್ನೊಂದು ಕ್ರಮವನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಪ್ರಧಾನಿ ಕಚೇರಿಯೊಂದಿಗೆ ನಿಕಟರಾಗಿರುವ ಅಧಿಕಾರಿಗಳು ಹೇಳಿದ್ದಾರೆ. ಬೇನಾಮಿ ಅಥವಾ ಸುಳ್ಳುಹೆಸರುಗಳಲ್ಲಿ ನೋಂದಣಿಯಾಗಿರುವ ಆಸ್ತಿಗಳ ಮೇಲೆ ಗದಾಪ್ರಹಾರ ಪ್ರಕಟಿಸಲ್ಪಡುವ ನಿರೀಕ್ಷೆಯಿದೆ.

ಮೋದಿ ಮಂಗಳವಾರ ಪ್ರಚಲಿತ ಆರ್ಥಿಕ ಸ್ಥಿತಿಯನ್ನು ಚರ್ಚಿಸಲು ನೀತಿ ಆಯೋಗದ ಅರ್ಥಶಾಸ್ತ್ರಜ್ಞರು ಮತ್ತು ಆರ್ಥಿಕ ಪಂಡಿತರನ್ನು ಭೇಟಿಯಾಗಿದ್ದರು.

ಹೊಸವರ್ಷದ ಮುನ್ನಾ ದಿನ ಸಂಭಾವ್ಯ ಮೋದಿ ಭಾಷಣದ ಸುದ್ದಿಗೆ ಟ್ವಿಟರ್‌ನಲ್ಲಿ ತಕ್ಷಣವೇ ಪ್ರತಿಕ್ರಿಯೆಗಳು ಹರಿದು ಬಂದಿವೆ.

ಯಾವ ಹೊಸ ಪ್ರಕಟಣೆಗಳನ್ನು ನಿರೀಕ್ಷಿಸಬಹುದು ಎಂಬ ಬಗ್ಗೆ ಈಗಾಗಲೇ ಊಹಾಪೋಹಗಳು ದಟ್ಟವಾಗಿವೆ. ಇತ್ತೀಚಿಗಷ್ಟೇ ಬಿಡುಗಡೆಗೊಂಡಿರುವ 2,000 ರೂ.ನೋಟುಗಳು ಅಮಾನ್ಯಗೊಳ್ಳಲಿವೆಯೇ? ಬ್ಯಾಂಕಿನಿಂದ ಹಿಂಪಡೆಯುವ ಹಣದ ಮೇಲಿನ ನಿರ್ಬಂಧ ರದ್ದಾಗಲಿದೆಯೇ? ನೋಟು ರದ್ದತಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರವೇನಾದರೂ ಪ್ರಕಟಗೊಳ್ಳಲಿದೆಯೇ? ಅಥವಾ ಇನ್ನೊಂದು ವಾಗಾಡಂಬರದ ಭಾಷಣವನ್ನು ಮಾತ್ರ ಕೇಳಲಿದ್ದೆವೆಯೇ? ಇಂತಹ ಅಸಂಖ್ಯ ಪ್ರಶ್ನೆಗಳು ಹಾಸ್ಯದ ಟಚ್‌ನೊಂದಿಗೆ ಹರಿದು ಬಂದಿದ್ದು, ಟ್ವಿಟರ್ ಸಮುದಾಯ ಎಂದಿನಂತೆ ಸಿನಿಕತನದ ಜೊತೆ ಹಾಸ್ಯಪ್ರಜ್ಞೆಯನ್ನು ಮೆರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News