ಕಟ್ಟರ್ ಯಹೂದಿ ಮಹಿಳೆ ಮೇಲೆ ಹಲ್ಲೆ ಮಾಡಿದಾತನನ್ನು ಹಿಡಿದು ಕೊಟ್ಟ ಮುಸ್ಲಿಂ ಬಾಲಕ
ನ್ಯೂಯಾರ್ಕ್, ಡಿ.29: ಬ್ರೂಕ್‌ಲಿನ್ ಸಬ್‌ವೇ ರೈಲಿನಲ್ಲಿ ಸಂಚರಿಸುತ್ತಿದ್ದ ಯೆಹೂದಿ ಮಹಿಳೆಯೋರ್ವರ ಮೇಲೆ ವಿನಾಕಾರಣ ಹಲ್ಲೆ ನಡೆಸಿದ ಅಲೆಮಾರಿ ಸೈಕೋ ವ್ಯಕ್ತಿಯೋರ್ವನನ್ನು ಮುಸ್ಲಿಂ ವಿದ್ಯಾರ್ಥಿಯೋರ್ವ ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ನಡೆದಿದೆ.
ಸಂಜೆ ಸುಮಾರು 7.50ರ ವೇಳೆ ಕೋನಿ ದ್ವೀಪಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆ ಮಹಿಳೆ ತನ್ನಷ್ಟಕ್ಕೆ ಪುಸ್ತಕವೊಂದನ್ನು ಓದುತ್ತಿದ್ದಳು. ನ್ಯೂಕರ್ಕ್ ಏವ್ ಸ್ಟೇಷನ್ ಬಳಿ ರೈಲು ಬರುತ್ತಿದ್ದಂತೆಯೇ ಏಕಾಏಕಿ ಮಹಿಳೆಯ ಬಳಿ ಬಂದ ಜೋನ್ಸ್ ಎಂಬ ವ್ಯಕ್ತಿ ಆಕೆಯ ಕಪಾಳಕ್ಕೆ ಬಾರಿಸಿದ. ಈ ಏಟಿನಿಂದ ಆಕೆಯ ತುಟಿ ಹರಿದು ಹೋಯಿತು ಮತ್ತು ರಕ್ತ ಸುರಿಯತೊಡಗಿತು. ಆಕೆ ಧರಿಸಿದ್ದ ಕನ್ನಡಕ ಪುಡಿಪುಡಿಯಾಯಿತು.
ಯಾಕೆ ನನ್ನನ್ನು ಹೊಡೆಯುತ್ತಿದ್ದೀ.. ಎಂದು ಚೀರುತ್ತಾ ಆ ಮಹಿಳೆ ನೆಲದ ಮೇಲೆ ಬಿದ್ದು ಮೂರ್ಚೆ ತಪ್ಪಿದಳು. ಈ ವೇಳೆ ಪಕ್ಕದಲ್ಲಿದ್ದ ಮತ್ತೋರ್ವ ಮಹಿಳೆ ಈಕೆಯ ಸಹಾಯಕ್ಕೆ ಧಾವಿಸಿ ಬಂದಳು. ಈ ವೇಳೆ ಹಲ್ಲೆಗೈದ ಜೋನ್ಸ್ ರೈಲಿನಿಂದ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿದ.
ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಹ್ಮದ್ ಖಲೀಫಾ ಎಂಬ 17ರ ಹರೆಯದ ಮುಸ್ಲಿಂ ಬಾಲಕ ಅತೀವ ಸಾಹಸ ಮೆರೆದು ಜೋನ್ಸ್‌ನ ಬೆನ್ನಟ್ಟಿದ. ಸುಮಾರು 6 ಅಡಿ 6 ಇಂಚು ಎತ್ತರದ ದೃಢಕಾಯ ವ್ಯಕ್ತಿ ಜೋನ್ಸ್ ಶರವೇಗದಿಂದ ಓಡುತ್ತಿದ್ದರೆ ಖಲೀಫಾ ಪಟ್ಟುಬಿಡದೆ ಈತನ ಬೆನ್ನು ಹತ್ತಿದ. ಈ ವೇಳೆ ಜೋನ್ಸ್ ಓಡಿ ತಪ್ಪಿಸಿಕೊಂಡಿದ್ದ. ಕೊನೆಗೂ ಈತನನ್ನು ಬಸ್‌ನಿಲ್ದಾಣ ಒಂದರಲ್ಲಿ ಪತ್ತೆಹಚ್ಚುವಲ್ಲಿ ಖಲೀಫಾ ಯಶಸ್ವಿಯಾದ. ಜೋನ್ಸ್‌ನ ಬಳಿ ಹೋಗಿ ನಿಂತುಕೊಂಡ.
ಅಷ್ಟರಲ್ಲಿ ಬಸ್ ಒಂದನ್ನು ಏರಿದ್ದ ಜೋನ್ಸ್. ಈ ವೇಳೆ ಪೊಲೀಸರೂ ಅಲ್ಲಿಗೆ ಬಂದರು. ಆಗ ಬಸ್ಸಿನಲ್ಲಿ ಅಡಗಿ ಕುಳಿತಿದ್ದ ಜೋನ್ಸ್‌ನ ಬಳಿ ತೆರಳಿದ ಖಲೀಫಾ, ಹೇಡಿ.. ಹೊರಗೆ ಬಾ.. ಎಂದು ಗದರಿದ. ಈ ವೇಳೆ ಒಮ್ಮಿಂದೊಮ್ಮೆಗೇ ಹಿಂಸಾತ್ಮಕವಾಗಿ ವರ್ತಿಸತೊಡಗಿದ ಜೋನ್ಸ್, ನನ್ನ ಸುದ್ದಿಗೆ ಬಂದರೆ ನಿಮ್ಮನ್ನೆಲ್ಲಾ ಮುಗಿಸಿ ಬಿಡುವೆ ಎಂದು ಅಬ್ಬರಿಸತೊಡಗಿದ. ಕಡೆಗೂ ಪೊಲೀಸರು ಆತನನ್ನು ಬಸ್ಸಿನಿಂದ ಹೊರಗೆಳೆದು ಬಂಧಿಸುವಲ್ಲಿ ಸಫಲರಾದರು.
ಇದಕ್ಕೂ ಮುಂಚೆ, ಸುಮಾರು 9 ತಿಂಗಳ ಹಿಂದೆ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವ್ಯಕ್ತಿಯೋರ್ವನನ್ನು ಜೀವದ ಹಂಗು ತೊರೆದು ರಕ್ಷಿಸುವಲ್ಲಿ ಖಲೀಫಾ ಯಶಸ್ವಿಯಾಗಿದ್ದ.