ನೂತನ ಮುಖ್ಯ ನ್ಯಾಯಾಧೀಶರ ನೇಮಕ ವಿರೋಧಿಸಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ
ಹೊಸದಿಲ್ಲಿ,ಡಿ.30: ಭಾರತದ ಮುಂದಿನ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ಜಗದೀಶ ಸಿಂಗ್ ಕೆಹರ್ ಅವರ ನೇಮಕವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿತು.
ನ್ಯಾಯಾಂಗ ಪಾರದರ್ಶಕತೆ ಮತ್ತು ಸುಧಾರಣೆಗಳಿಗಾಗಿ ರಾಷ್ಟ್ರೀಯ ವಕೀಲರ ಅಭಿಯಾನ(ಎನ್‌ಎಲ್‌ಸಿಜೆಟಿಆರ್) ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಆರ್.ಕೆ.ಅಗರವಾಲ್ ಮತ್ತು ಡಿ.ವೈ.ಚಂದ್ರಚೂಡ ಅವರನ್ನೊಳಗೊಂಡ ರಜಾಕಾಲದ ಪೀಠವು, ಅರ್ಜಿಯಲ್ಲಿ ಯಾವುದೇ ಸತ್ವವಿಲ್ಲ ಎಂದು ಹೇಳಿತು.
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಡಿ.19ರಂದು ನ್ಯಾ.ಕೆಹರ್ ಅವರನ್ನು ಭಾರತದ 44ನೇ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಳಿಸಿದ್ದಾರೆ. ಹಾಲಿ ಮುಖ್ಯ ನ್ಯಾಯಾಧೀಶ ನ್ಯಾ.ಟಿ.ಎಸ್.ಠಾಕೂರ್ ಅವರು ಜ.3ರಂದು ನಿವೃತ್ತರಾಗಲಿದ್ದು, ಅವರ ಉತ್ತರಾಧಿಕಾರಿಯಾಗಿ ನ್ಯಾ.ಕೆಹರ್ ಡಿ.4ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ(ಎನ್‌ಜೆಎಸಿ) ಮತ್ತು ಎನಜೆಎಸಿ ಕಾಯ್ದೆಗೆ ಜನ್ಮ ನೀಡಿದ್ದ ಸಂವಿಧಾನದ 99ನೇ ತಿದ್ದುಪಡಿಯು ಅಸಾಂವಿಧಾನಿಕವಾಗಿದೆ ಎಂದು 2015,ಅ.16ರಂದು ತೀರ್ಪು ನೀಡಿದ್ದ ಐವರು ನ್ಯಾಯಾಧೀಶರ ಸಂವಿಧಾನ ಪೀಠದ ನೇತೃತ್ವವನ್ನು ನ್ಯಾ.ಕೆಹರ್ ವಹಿಸಿದ್ದರು ಮತ್ತು ಸ್ವಯಂ ಅವರೇ ಈ ತೀರ್ಪಿನ ಅತ್ಯಂತ ದೊಡ್ಡ ಫಲಾನುಭವಿಯಾಗಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದರು.