×
Ad

ಎಸ್ಪಿಯಿಂದ ಉ.ಪ್ರ ಸಿಎಂ ಅಖಿಲೇಶ್ ಉಚ್ಚಾಟನೆ

Update: 2016-12-30 19:09 IST

ಲಕ್ನೋ,ಡಿ.30: ನಿರ್ಣಾಯಕ ರಾಜ್ಯ ವಿಧಾನಸಭೆ ಚುನಾವಣೆ ಸನ್ನಿಹಿತವಾಗಿರುವಾಗ ಸ್ಫೋಟಕ ನಿರ್ಧಾರವೊಂದನ್ನು ಕೈಗೊಂಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ ಅವರು ತನ್ನ ಪುತ್ರ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವರನ್ನು ಶುಕ್ರವಾರ ಪಕ್ಷದಿಂದ ಉಚ್ಚಾಟಿಸಿದ್ದಾರೆ. ತನ್ನ ಸೋದರ ಸಂಬಂಧಿ ಹಾಗೂ ಪಕ್ಷದ ಹಿರಿಯ ನಾಯಕ ರಾಮಗೋಪಾಲ ಯಾದವ ಅವರನ್ನೂ ಹಿರಿಯ ಯಾದವ ಇತ್ತೀಚಿನ ತಿಂಗಳುಗಳಲ್ಲಿ ಎರಡನೇ ಬಾರಿಗೆ ಪಕ್ಷದಿಂದ ಉಚ್ಚಾಟಿಸಿದ್ದಾರೆ. ರಾಮಗೋಪಾಲ ಮುಖ್ಯಮಂತ್ರಿಯ ವೃತ್ತಿಜೀವನವನ್ನು ಹಾಳು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಪಕ್ಷವನ್ನು ದುರ್ಬಲಗೊಳಿ ಸುತ್ತಿರುವುದಕ್ಕಾಗಿ ಅಖಿಲೇಶ್ ಮತ್ತು ರಾಮಗೋಪಾಲ ಅವರನ್ನು ಉಚ್ಚಾಟಿಸಲಾಗಿದೆ ಎಂದು ಮುಲಾಯಂ ಹೇಳಿದ್ದಾರೆ.

ಪುತ್ರನ ಉಚ್ಚಾಟನೆಯನ್ನು ಪ್ರಕಟಿಸಿದ ಮುಲಾಯಂ, ಅಖಿಲೇಶರನ್ನು ಮುಖ್ಯಮಂತ್ರಿ ಯಾಗಿ ಮಾಡಿದ್ದು ತಾನು ಮತ್ತು ಈಗ ಅವರು ತನ್ನೊಂದಿಗೂ ಸಮಾಲೋಚಿಸುವುದಿಲ್ಲ ಎಂದು ಹೇಳಿದರು. ಅಖಿಲೇಶ್‌ರ ಸ್ಥಾನದಲ್ಲಿ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವುದನ್ನು ಅವರು ತಕ್ಷಣಕ್ಕೆ ಹೇಳಲಿಲ್ಲ. ರಾಜ್ಯದಲ್ಲಿ ಚುನಾವಣೆ ಯಾವುದೇ ಸಮಯದಲ್ಲಿ ಘೋಷಣೆಯಾಗಬಹುದು.

ಕಳೆದ ಕೆಲವು ಸಮಯದಿಂದ ಎಸ್‌ಪಿ ವಿಭಜನೆಯತ್ತ ಸಾಗುತ್ತಿರುವಂತೆ ಕಂಡು ಬಂದಿತ್ತಾದರೂ, ಅಖಿಲೇಶರ ಕಟ್ಟಾ ಬೆಂಬಲಿಗರಾಗಿರುವ ರಾಮಗೋಪಾಲ ಮುಲಾಯಂರನ್ನು ಉಲ್ಲಂಘಿಸಿ ಇಂದು ಪಕ್ಷದ ತುರ್ತು ಸಭೆಯನ್ನು ಕರೆದಿದ್ದು ಪಕ್ಷದ ವಿಭಜನೆಗೆ ಮುಹೂರ್ತವನ್ನು ಬರೆಯಿತು. ವಿಧಾನಸಭಾ ಚುನಾವಣೆಗಾಗಿ ಅಭ್ಯರ್ಥಿಗಳ ಸಮಾನಾಂತರ ಪಟ್ಟಿಯನ್ನು ಪ್ರಕಟಿಸಿದ್ದಕ್ಕಾಗಿ ಮುಲಾಯಂ ಅಖಿಲೇಶ್‌ಗೆ ಶೋಕಾಸ್ ನೋಟಿಸ್ ಹೊರಡಿಸಿದ ಬಳಿಕ ಈ ತುರ್ತುಸಭೆಯನ್ನು ಕರೆಯಲಾಗಿತ್ತು.

ಮುಲಾಯಂ ಶನಿವಾರ ಇಲ್ಲಿ ತಾನು ಆಯ್ಕೆ ಮಾಡಿರುವ ಎಲ್ಲ ಅಭ್ಯರ್ಥಿಗಳ ಸಭೆಯನ್ನು ಕರೆದಿದ್ದಾರೆ. ಅವರು ಪಕ್ಷದ ಅಧಿಕೃತ ಅಭ್ಯರ್ಥಿಗಾಗಿದ್ದಾರೆ ಮತ್ತು ತಾನು ಪಕ್ಷದ ಪ್ರಶ್ನಾತೀತ ನಾಯಕನಾಗಿದ್ದೇನೆ ಎನ್ನುವುದನ್ನು ಸ್ಪಷ್ಟಪಡಿಸುವುದು ಈ ಸಭೆಯನ್ನು ಕರೆದಿರುವ ಉದ್ದೇಶವಾಗಿದೆ ಎನ್ನಲಾಗಿದೆ.

ಅಖಿಲೇಶ್ ಪ್ರಕಟಿಸಿರುವ ಪಟ್ಟಿಯಲ್ಲಿನ 187 ಅಭ್ಯರ್ಥಿಗಳು ಮುಲಾಯಂ ಪ್ರಕಟಿಸಿ ರುವ ಪಕ್ಷದ ಅಧಿಕೃತ ಪಟ್ಟಿಯಲ್ಲೂ ಇದ್ದಾರೆ. ಈ ಪೈಕಿ ಎಷ್ಟು ಜನರು ಮುಲಾಯಂಗೆ ಬೆಂಬಲ ಸೂಚಿಸಿ ನಾಳೆಯ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನುವುದು ಆಸಕ್ತಿಪೂರ್ಣ ವಾಗಿದೆ.

ಅಖಿಲೇಶ್ ನಿನ್ನೆ ತನ್ನದೇ ಆದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದ ನಡೆ ಲಖ್ನೋದಲ್ಲಿ ನಡೆದ ಸಭೆಯಲ್ಲಿ ಸಹಮತಕ್ಕೆ ಬರುವಲ್ಲಿ ವಿಫಲಗೊಂಡ ಬಳಿಕ ತನ್ನ ಪ್ರಮುಖ ನಿಕಟವರ್ತಿಗಳಿಗೆ ಪಕ್ಷದ ಟಿಕೆಟ್ ನೀಡುವಂತೆ ತನ್ನ ತಂದೆಯ ಮೇಲೆ ಒತ್ತಡ ಹೇರುವ ಕೊನೆಯ ಪ್ರಯತ್ನವಾಗಿತ್ತು ಎನ್ನಲಾಗಿದೆ.

ಅಖಿಲೇಶ್ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ನಡುವೆ ಕಳೆದ ಕೆಲವು ತಿಂಗಳುಗಳಿಂದ ಅಧಿಕಾರಕ್ಕಾಗಿ ಕಚ್ಚಾಟ ನಡೆಯುತ್ತಿದೆ. ಮುಲಾಯಂ ಇಂದು ಅಖಿಲೇಶ್‌ರ ಉಚ್ಚಾಟನೆಯನ್ನು ಪ್ರಕಟಿಸುವಾಗ ಶಿವಪಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News