ಮೋದಿ ಶ್ವೇತಪತ್ರ ಹೊರಡಿಸಲಿ: ಪೃಥ್ವಿರಾಜ್ ಚೌಹಾಣ್
ಬೆಂಗಳೂರು, ಡಿ.30: ಕೇಂದ್ರ ಸರಕಾರ ಏಕಾಏಕಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿರುವ ಹಿಂದಿನ ಸತ್ಯಾಂಶದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶ್ವೇತಪತ್ರ ಹೊರಡಿಸಲಿ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಸವಾಲು ಹಾಕಿದ್ದಾರೆ.
ಶುಕ್ರವಾರ ನಗರದ ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ.8 ರಂದು ಪ್ರಧಾನಿ ನರೇಂದ್ರ ಮೋದಿ 500 ಮತ್ತು 1 ಸಾವಿರ ರೂ.ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ಕಪ್ಪು ಹಣಕ್ಕೆ ಕಡಿವಾಣ ಹಾಕಲಾಗುವುದೆಂದು ತಿಳಿಸಿದ್ದರು. ಆದರೆ, ಇದುವರೆಗೂ ಎಷ್ಟು ಕೋಟಿ ಕಪ್ಪು ಹಣ ಸಂಗ್ರಹವಾಗಿದೆ ಎನ್ನುವುದರ ಬಗ್ಗೆ ಮಾಹಿತಿ ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.
ಕಪ್ಪು ಹಣ ಶೇಕಡ ಆರರಷ್ಟು ಮಾತ್ರ ಕರೆನ್ಸಿ ರೂಪದಲ್ಲಿದೆ. ಇನ್ನು ಉಳಿದ 94 ರಷ್ಟು ಕಪ್ಪು ಹಣ ರಿಯಲ್ ಎಸ್ಟೇಟ್, ಚಿನ್ನ, ಷೇರುಗಳು ಹಾಗೂ ಇನ್ನಿತರೆ ಹೂಡಿಕೆಗಳಲ್ಲಿವೆ ಎಂದ ಅವರು, ಇದರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ದಿಢೀರ್ ಕರೆನ್ಸಿ ನಿಷೇಧಿಸಿ ನೂರು ಕೋಟಿ ನಾಗರಿಕರಿಗೆ ತಲೆನೋವು ಉಂಟುಮಾಡಿದ್ದಾರೆ ಎಂದು ಪೃಥ್ವಿರಾಜ್ ಚೌಹಾಣ್ ಕಿಡಿಕಾರಿದರು.
ಕ್ಯಾಶ್‌ಲೆಸ್: ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಕ್ಯಾಶ್‌ಲೆಸ್ ಮಾಡುತ್ತೇನೆ ಎಂದಿದ್ದಾರೆ. ಆದರೆ, ಚೀನಾ ದೇಶ ಶೇಕಡ 90ರಷ್ಟು, ಬ್ರೆಜಿಲ್ 85 ರಷ್ಟು ಹಾಗೂ ಯುನೆಟೈಡ್ ಸ್ಟೇಟ್ಸ್ ಸೇರಿ ಇನ್ನಿತರೆ ಮುಂದುವರೆದ ದೇಶಗಳು ಸಹ ಕ್ಯಾಶ್‌ಲೆಸ್‌ಗೆ ಮುಂದಾಗಿಲ್ಲ. ಅಲ್ಲದೆ, ಆನ್‌ಲೈನ್ ಮೂಲಕ ಹಣ ಚಲಾವಣೆಗೆ ಅನೇಕ ನ್ಯೂನತೆಗಳಿವೆ ಎಂದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲೂ ನೋಟು ರದ್ದು ಸರಿಯಲ್ಲ ಎಂದು ಹೇಳಲಾಗಿದೆ ಎಂದು ತಿಳಿಸಿದರು.
2ನೆ ಸರ್ಜಿಕಲ್ ಸ್ಟ್ರೆಕ್: 50 ದಿನಗಳ ಹಿಂದೆ ನೋಟು ರದ್ದುಗೊಳಿಸುವ ಮೂಲಕ ಪ್ರಧಾನಿ ಮೋದಿ ದೇಶದ ಮೇಲೆ ಮೊದಲ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದರು. ನಾಳೆ ದೇಶವನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ ಎರಡನೆ ಸರ್ಜಿಕಲ್ ಸ್ಟ್ರೈಕ್‌ಗೆ ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಗರಿಷ್ಠ ಮೊತ್ತದ ನೋಟು ನಿಷೇಧದಿಂದ ಕಪ್ಪುಹಣ ಹಾಗೂ ಉಗ್ರವಾದ ನಿಯಂತ್ರಿಸಬಹುದು ಎಂದು ಪ್ರಧಾನಿ ಹೇಳಿದ್ದರು. ಆದರೆ, ನೋಟು ನಿಷೇಧವಾದ ನಂತರ ಉಗ್ರವಾದ ನಿಯಂತ್ರಣಗೊಂಡಿದೆಯೇ ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದ ಅವರು, ದೇಶದ ಆರ್ಥಿಕ ವ್ಯವಸ್ಥೆಯ ದಿಕ್ಕು ತಪ್ಪಲು ಪ್ರಧಾನಿ ನರೇಂದ್ರ ಮೋದಿಯೇ ನೇರ ಕಾರಣ. ನಗದು ರಹಿತ ದೇಶ ನಿರ್ಮಾಣ ಮಾಡುತ್ತೇವೆ ಎಂದಿದ್ದೀರಿ. ಆದರೆ, ಇನ್ನೂ ಕೆಲವು ಹಳ್ಳಿಗಳಿಗೆ ಸಂಪರ್ಕವೆ ಕಲ್ಪಿಸಿಲ್ಲ ಎಂದರು.
ನೋಟು ನಿಷೇಧ ನಿರ್ಧಾರದಿಂದ ಕೇವಲ 6 ಪ್ರತಿಶತ ಕಪ್ಪುಹಣ ಮಾತ್ರ ನಿಯಂತ್ರಣಗೊಂಡಿದೆ. ಈಗಾಗಲೇ ದೇಶದಲ್ಲಿರುವ ಕಪ್ಪುಹಣ ಬಿಳಿಯಾಗಿ ಪರಿವರ್ತನೆಗೊಂಡಿದೆ. ಕಪ್ಪು ಹಣವನ್ನು ಬಳಿ ಮಾಡುವ ದಂಧೆಯಲ್ಲಿ ಬಿಜೆಪಿ ನಾಯಕರು ಪಾಲ್ಗೊಂಡಿದ್ದಾರೆ ಎಂದು ಪೃಥ್ವಿರಾಜ್ ಚೌಹಾಣ್ ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ಕಾಂಗ್ರೆಸ್ ಮುಖಂಡರಾದ ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್ ಸೇರಿ ಪ್ರಮುಖರು ಹಾಜರಿದ್ದರು.
ಮಾತನಾಡುತ್ತಿಲ್ಲ..!
‘ಪಾಕಿಸ್ತಾನ ಪುನಃ ದೇಶದ ಮೇಲೆ ದಾಳಿ ನಡೆಸುತ್ತಿದೆ ಅಲ್ಲದೆ, ಕಾಶ್ಮೀರದಲಿಯ್ಲೂ ಉಗ್ರರು ದಾಳಿ ಮಾಡುತ್ತಿದ್ದಾರೆ. ಇನ್ನು ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ನರೇಂದ್ರ ಮೋದಿ ಅವರು ಲಂಚ ಪಡೆದಿದ್ದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ’
-ಪೃಥ್ವೀರಾಜ್ ಚೌಹಾಣ್, ಮಾಜಿ ಸಿಎಂ, ಮಹಾರಾಷ್ಟ್ರ