ದೇವಸ್ಥಾನದ ಅರ್ಚಕರ ಮನೆಗಳಿಗೆ ಐಟಿ ದಾಳಿಗೆ ಶಿವಸೇನೆ ಟೀಕೆ
ಮುಂಬೈ,ಡಿ.30: ಇತ್ತೀಚಿಗೆ ನಾಸಿಕ್‌ನಲ್ಲಿ ತೃಯಂಬಕೇಶ್ವರ ದೇವಸ್ಥಾನದ ಇಬ್ಬರು ಅರ್ಚಕರ ಮನೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ಶೋಧ ಕಾರ್ಯಾ ಚರಣೆಗಳನ್ನು ಕಟುವಾಗಿ ಟೀಕಿಸಿರುವ ಶಿವಸೇನೆಯು, ಹಿಂದು ದೇವಸ್ಥಾನಗಳನ್ನು ಹೊರತುಪಡಿಸಿ ಇತರ ಆರಾಧನಾ ಸ್ಥಳಗಳ ಮೇಲೆ ದಾಳಿ ನಡೆಸುವ ಸಂದರ್ಭ ಬಂದರೆ ಅಧಿಕಾರಿಗಳು ಇದೇ ಧೈರ್ಯವನ್ನು ತೋರಿಸುವರೇ ಎಂದು ಪ್ರಶ್ನಿಸಿದೆ.
ಒಂದು ವೇಳೆ ಅರ್ಚಕರ ಬಳಿ ಹಣವಿದ್ದರೂ ಅದು ಅಕ್ರಮ ಮಾರ್ಗಗಳಿಂದ ಸಂಪಾದಿಸಿದ ಸಂಪತ್ತಲ್ಲ. ತೀರ ಪ್ರತಿಕೂಲ ಹವಾಮಾನದಲ್ಲಿಯೂ ಕಷ್ಟಪಟ್ಟು ದುಡಿದು ಹಣ ಗಳಿಸುವುದು ತಪ್ಪೇನಲ್ಲ ಎಂದು ಶಿವಸೇನೆ ತನ್ನ ಮುಖವಾಣಿ ‘ಸಾಮನಾ ’ದ ಇಂದಿನ ಸಂಚಿಕೆಯ ಸಂಪಾದಕೀಯದಲ್ಲಿ ಹೇಳಿದೆ.
ತೃಯಂಬಕೇಶ್ವರ ಎಲ್ಲ ರೀತಿಯ ಹಿಂದು ವಿಧಿಗಳನ್ನು ನಡೆಸುವ ಸ್ಥಳವಾಗಿದೆ. ಇದಕ್ಕಾಗಿ ರಾಷ್ಟ್ರಾದ್ಯಂತದ ನೂರಾರು ಜನರು ಬರುತ್ತಾರೆ. ಇಲ್ಲಿಯ ಅರ್ಚಕರ ಬಳಿ ಬಹಳ ದುಡ್ಡು ಇರಬಹುದು ಎಂದು ಜನರು ಹೇಳುತ್ತಾರೆ. ಆದರೆ ಅರ್ಚಕರ ಬಳಿ ಎಷ್ಟು ಹಣವಿರುತ್ತದೆ? ಇದ್ದರೂ ಅದು ಅಕ್ರಮವಾಗಿ ಗಳಿಸಿದ್ದೇನಲ್ಲ ಎಂದು ಅದು ಹೇಳಿದೆ.
ಅರ್ಚಕರು ಅಕ್ರಮ ಸಂಪತ್ತು ಹೊಂದಿದ್ದಾರೆಂದು ಆರೋಪಿಸಿ ಅವರ ಕಚೇರಿಗಳು ಮತ್ತು ಮನೆಗಳ ಮೇಲೆ ಮಂಗಳವಾರ ಈ ದಾಳಿಗಳು ನಡೆದಿದ್ದವು.