ದಿಲ್ಲಿ ಆರೋಗ್ಯ ಸಚಿವನ ಒಸ್‌ಡಿ ಕಚೇರಿಯಲ್ಲಿ ಸಿಬಿಐ ಶೋಧ
ಹೊಸದಿಲ್ಲಿ, ಡಿ.30: ಚಾಚಾ ನೆಹರೂ ಬಾಲ ಚಿಕಿತ್ಸಾಲಯದಲ್ಲಿ ಹಿರಿಯ ಸ್ಥಾನಿಕ ಅಧಿಕಾರಿಯಾಗಿ ಡಾ. ನಿಕುಂಜ್ ಅಗರ್ವಾಲ್‌ರ ನೇಮಕ ಹಾಗೂ ಬಳಿಕ ಅವರನ್ನು ಆರೋಗ್ಯ ಸಚಿವರ ಸಹಾಯಕನನ್ನಾಗಿ ನೇಮಿಸುವಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿ ದಿಲ್ಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ರ ಒಎಸ್‌ಡಿ ಕಚೇರಿಯ ಮೇಲೆ ಸಿಬಿಐ ಇಂದು ದಾಳಿ ನಡೆಸಿದೆ.
ಜೈನ್‌ರ ಒಎಸ್‌ಡಿ ನಿಂಕುಂಜ್ ಅಗರ್ವಾಲ್ ಹಾಗೂ ಚಾಚಾ ನೆಹರೂ ಬಾಲ ಚಿಕಿತ್ಸಾಲಯದ ನಿರ್ದೇಶಕ ಅನೂಪ್ ಮೊಹ್ತಾರ ಕಚೇರಿಗಳಲ್ಲಿ ಶೋಧ ನಡೆಸಲಾಗಿದೆಯೆಂದು ಸಿಬಿಐ ಮೂಲಗಳು ತಿಳಿಸಿವೆ.
ಅಗರ್ವಾಲ್‌ರ ನೇಮಕಾತಿ ಹಾಗೂ ಅಹ್ಮದಾಬಾದ್ ಐಐಎಂನಲ್ಲಿ ಕೋರ್ಸ್ ಒಂದಕ್ಕೆ ಅವರ ನಾಮಕರಣ ಮತ್ತು ಚೀನದ ಬೀಜಿಂಗ್‌ಗೆ ಪ್ರವಾಸವೊಂದಕ್ಕೆ ಹೆಸರಿಸಿರುವುದು ಸೇರಿದಂತೆ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಅಗರ್ವಾಲ್ ಹಾಗೂ ಮೊಹ್ತಾರ ಕಚೇರಿಗಳಿಗೆ ತನಿಖೆ ಸಂಸ್ಥೆಯ ತಂಡಗಳು ಹೋಗಿದ್ದವು. ತಂಡವು ಅಗರ್ವಾಲ್‌ರೊಂದಿಗೆ ಅವರ ಕಚೇರಿಯಲ್ಲಿ ಮಾತನಾಡಿದೆಯೆಂದು ಅವರು ಹೇಳಿವೆ.
ಸಚಿವ ಜೈನ್‌ರ ಕಚೇರಿಯಲ್ಲಿ ಶೋಧ ನಡೆದಿಲ್ಲ. ಸದ್ಯಕ್ಕೆ ಒಎಸ್‌ಡಿ ಹಾಗೂ ನಿರ್ದೇಶಕನ ಕಚೇರಿಗಳಿಗೆ ಅದು ಸೀಮಿತವಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ದಿಲ್ಲಿ ಸರಕಾರದ ವಿಜಿಲೆನ್ಸ್ ಉಪಕಾರ್ಯದರ್ಶಿ ಕೆ.ಎಸ್. ಮೀನಾರ ದೂರಿನ ಆಧಾರದಲ್ಲಿ, ಜೈನ್‌ರ ಒಎಸ್‌ಡಿಯಾಗಿ ಅಗರ್ವಾಲ್‌ರ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿ ಸಿಬಿಐ ಈ ಮೊದಲು ಎಫ್‌ಐಆರ್ ದಾಖಲಿಸಿತ್ತು.
ಹಿರಿಯ ಸ್ಥಾನಿಕನ ನೇಮಕದ ಪ್ರಸ್ತಾವವಿಲ್ಲದಿದ್ದರೂ ಹಾಗೂ ಅಂತಹ ಒಂದು ಹುದ್ದೆಯೇ ಇಲ್ಲದಿರುವಾಗ 2015ರ ಆ.10ರಂದು ಅಗರ್ವಾಲ್‌ರನ್ನು ಚಾಚಾ ನೆಹರೂ ಬಾಲ ಚಿಕಿತ್ಸಾಲಯದ ಹಿರಿಯ ಸ್ಥಾನಿಕನನ್ನಾಗಿ(ಆರ್ಥೊ) ನೇಮಿಸಲಾಗಿತ್ತೆಂದು ವಿಜಿಲೆನ್ಸ್ ಇಲಾಖೆ ದೂರು ನೀಡಿತ್ತು.
ಅಗರ್ವಾಲ್ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರ ನಾದಿನಿಯ ಅಳಿಯನೆಂದು ಬಿಜೆಪಿ ನಾಯಕ ವಿಜೇಂದ್ರ ಗುಪ್ತಾ ಆರೋಪಿಸಿದ್ದರು.