ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಅಮಾನತು
ಹೊಸದಿಲ್ಲಿ, ಡಿ.30: ಕಾಮನ್‌ವೆಲ್ತ್ ಗೇಮ್ಸ್ ಹಗರಣದಲ್ಲಿ ಜೈಲಿಗೆ ಹೋಗಿ ಕಳಂಕಿತರಾದ ಸುರೇಶ್ ಕಲ್ಮಾಡಿ ಹಾಗೂ ಅಭಯ್ ಸಿಂಗ್ ಚೌಟಾಲಾರನ್ನು ತನ್ನ ಆಜೀವ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದ ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಯನ್ನು ಕೇಂದ್ರ ಕ್ರೀಡಾ ಸಚಿವಾಲಯ ಶುಕ್ರವಾರ ಅಮಾನತು ಮಾಡಿದೆ.
ಶುಕ್ರವಾರದ ಸಂಜೆ 5 ಗಂಟೆಯೊಳಗೆ ತಾನು ನೀಡಿದ್ದ ಶೋಕಾಸ್ ನೋಟಿಸ್‌ಗೆ ಐಒಎ ಉತ್ತರ ನೀಡದ ಹಿನ್ನೆಲೆಯಲ್ಲಿ ಕೇಂದ್ರ ಕ್ರೀಡಾ ಸಚಿವಾಲಯ ಐಒಎಯನ್ನು ಅಮಾನತು ಮಾಡುವ ಕಠಿಣ ನಿರ್ಧಾರ ಕೈಗೊಂಡಿದೆ. ಐಒಎ ಅಧ್ಯಕ್ಷ ಎನ್. ರಾಮಚಂದ್ರನ್ ವಿದೇಶದಲ್ಲಿರುವ ಕಾರಣ ಶೋಕಾಸ್ ನೋಟಿಸ್‌ಗೆ ಉತ್ತರಿಸಲು 15 ದಿನಗಳ ಕಾಲಾವಕಾಶ ನೀಡಬೇಕೆಂದು ಐಒಎ ಕೇಳಿಕೊಂಡಿತ್ತು.
‘‘ಸರಕಾರ ಕ್ರೀಡಾ ಸಂಸ್ಥೆಯ ತಪ್ಪು ನಿರ್ಧಾರವನ್ನು ಒಪ್ಪಿಕೊಳ್ಳಲಾರದು. ಐಒಎಗೆ ಶೋಕಾಸ್ ನೋಟಿಸ್ ನೀಡಿರುವುದು ಗಂಭೀರ ವಿಚಾರ. ಆದರೆ, ಅದಕ್ಕೆ ಅದು ಉತ್ತರಿಸದೇ 15 ದಿನಗಳ ಕಾಲಾವಕಾಶ ಕೇಳಿದೆ. ಕಳಂಕಿತರ ಆಯ್ಕೆಯನ್ನು ವಾಪಸು ಪಡೆಯುವ ತನಕ ಐಒಎಯನ್ನು ಅಮಾನತಿನಲ್ಲಿಡಲಾಗುತ್ತದೆ. ಐಒಎ ಅಮಾನತುಗೊಂಡಿರುವ ಹಿನ್ನೆಲೆಯಲ್ಲಿ ಸರಕಾರದ ಯಾವುದೇ ಆರ್ಥಿಕ ನೆರವು, ಸೌಲಭ್ಯಗಳನ್ನು ಪಡೆಯಲು ಅನರ್ಹವಾಗಿ’’ಎಂದು ಕೀಡಾ ಸಚಿವ ವಿಜಯ್ ಗೊಯೇಲ್ ಸುದ್ದಿಗಾರರಿಗೆ ತಿಳಿಸಿದರು.