×
Ad

ಮೂರನೆ ಟೆಸ್ಟ್‌ನ ಮೊದಲೇ ನಿವೃತ್ತಿ: ಮಿಸ್ಬಾವುಲ್‌ಹಕ್ ಸುಳಿವು

Update: 2016-12-30 23:16 IST

ಮೆಲ್ಬೋರ್ನ್, ಡಿ.30: ಆಸ್ಟ್ರೇಲಿಯ ವಿರುದ್ಧ ಎರಡನೆ ಟೆಸ್ಟ್‌ನಲ್ಲಿ ಹೀನಾಯವಾಗಿ ಸೋತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಟೆಸ್ಟ್ ತಂಡದ ನಾಯಕ ಮಿಸ್ಬಾವುಲ್ ಹಕ್ ಸಿಡ್ನಿ ಟೆಸ್ಟ್‌ನ ಮೊದಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಸುಳಿವು ನೀಡಿದ್ದಾರೆ.

ಪಾಕ್ ತಂಡ 2ನೆ ಟೆಸ್ಟ್‌ನಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಅಝರ್ ಅಲಿ ದ್ವಿಶತಕದ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 443 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.

ಮಳೆ ಪದೆ ಪದೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪಂದ್ಯ ಡ್ರಾಗೊಳ್ಳುವ ಸಾಧ್ಯತೆಯಿತ್ತು. ಆದರೆ, 5ನೆ ಹಾಗೂ ಕೊನೆಯ ದಿನವಾದ ಶುಕ್ರವಾರ ಪಾಕ್ ತಂಡ ಇನಿಂಗ್ಸ್ ಹಾಗೂ 18 ರನ್‌ನಿಂದ ಸೋತು ಸರಣಿಯನ್ನು 2-0 ಅಂತರದಿಂದ ಕಳೆದುಕೊಂಡಿತು.

ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಮಿಸ್ಬಾ ಅವರ ರಣತಂತ್ರ ಹಾಗೂ ಫೀಲ್ಡಿಂಗ್ ತಂತ್ರಗಾರಿಕೆ ಪ್ರಶ್ನಾರ್ಥಕವಾಗಿತ್ತು. ಮಿಸ್ಬಾ ಮೊದಲ ಇನಿಂಗ್ಸ್‌ನಲ್ಲಿ 11 ಹಾಗೂ 2ನೆ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದರು.

‘‘ಮುಂಬರುವ ದಿನಗಳಲ್ಲಿ ತನ್ನ ವೃತ್ತಿಬದುಕಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳುವೆ. ಮಂಗಳವಾರ ಆರಂಭವಾಗಲಿರುವ 3ನೆ ಟೆಸ್ಟ್‌ನಲ್ಲಿ ಆಡುವ ಬಗ್ಗೆ ಖಚಿತತೆಯಿಲ್ಲ. ನಿವೃತ್ತಿಯ ಬಗ್ಗೆ ಯೋಚಿಸುವ ಅಗತ್ಯ ಎದುರಾಗಿದೆ. ತಂಡಕ್ಕೆ ಕಾಣಿಕೆ ನೀಡಲು ಸಾಧ್ಯವಾಗದೆ ಇದ್ದಾಗ ತಂಡದಲ್ಲಿರುವುದು ಸರಿಯಲ್ಲ ಎನ್ನುವುದು ನನ್ನ ಬಲವಾದ ನಂಬಿಕೆ’’ ಎಂದು 2001ರಿಂದ 71 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ 42ರ ಪ್ರಾಯದ ಮಿಸ್ಬಾವುಲ್ ಹಕ್ ಹೇಳಿದ್ದಾರೆ.

‘‘ಒತ್ತಡದಿಂದ ಹೀಗೆಲ್ಲಾ ಆಗುತ್ತದೆ. ಆಸ್ಟ್ರೇಲಿಯಕ್ಕೆ ಎಲ್ಲ ಶ್ರೇಯಸ್ಸು ಸಲ್ಲಬೇಕು. ಆ ತಂಡ ನಮ್ಮನ್ನು ಒತ್ತಡಕ್ಕೆ ಸಿಲುಕಿಸಿತು. 443 ರನ್ ಗಳಿಸಿದ ಬಳಿಕ ಕೊನೆಯ ದಿನದಲ್ಲಿ ಪಂದ್ಯವನ್ನು ಸೋಲುವುದು ಸರಿಯಲ್ಲ. ನಮ್ಮ ಬ್ಯಾಟಿಂಗ್ ಬಗ್ಗೆಯೇ ದೂಷಿಸಿಕೊಳ್ಳಬೇಕಾಗಿದೆ. ಎಂಸಿಜಿ ಪಿಚ್ ಬ್ಯಾಟಿಂಗ್‌ಗೆ ಪೂರಕವಾಗಿತ್ತು’’ ಎಂದು 2ನ ಟೆಸ್ಟ್‌ನಲ್ಲಿ ಸೋತ ಬಳಿಕ ಮಿಸ್ಬಾ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News