ಟಿಪ್ಪುಸುಲ್ತಾನ್: ವಾಸ್ತವ ಮತ್ತು ಕಲ್ಪನೆ

Update: 2016-12-30 18:20 GMT

ಟಿಪ್ಪು ಇತಿಹಾಸ ತಜ್ಞ ಶೇಕ್ ಅಲಿಯವರು 2015ರಲ್ಲಿ ನೀಡಿದ ಒಂದು ಸಂದರ್ಶನದಲ್ಲಿ, ‘‘ಟಿಪ್ಪುವನ್ನು ಪಕ್ಷಪಾತಿ ಧಾರ್ಮಿಕ ಆಡಳಿತಗಾರ ಎಂದು ಬಿಂಬಿಸುವ ಪ್ರಯತ್ನ 1950ರ ದಶಕದಿಂದಲೂ ನಡೆದಿತ್ತು’’ ಎಂದು ಹೇಳಿದ್ದರು. 1980ರಲ್ಲಿ ‘ಟಿಪ್ಪು ಸುಲ್ತಾನ್ ಎಕ್ಸ್‌ರೇಡ್‌ಆನ್ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಪಫ್ಡ್ ಅಫ್ ನವಾಬ್’ ಎಂಬ ಕೃತಿಯನ್ನು ಐ.ಎಂ.ಮುತ್ತಣ್ಣ ಹೊರತಂದಿದ್ದಾರೆ. ಇದು ಟಿಪ್ಪುಬಗೆಗಿನ ತಪ್ಪುಕಲ್ಪನೆಗಳನ್ನು ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಭಾಗ-2

ಕೊಡಗಿನ ಮುಸ್ಲಿಮರು

ಕೊಡಗಿನ ಜಾನಪದದ ಪ್ರಕಾರ, ಇಸ್ಲಾಂಗೆ ಮತಾಂತರ ಹೊಂದಿದ 90 ಕುಟುಂಬಗಳು ಮೂರನೆ ಆಂಗ್ಲೋ ಮೈಸೂರು ಯುದ್ಧದ ಬಳಿಕ ಅಂದರೆ 1792ರಲ್ಲಿ ಕೊಡಗಿಗೆ ವಾಪಸಾದವು. ಆಗ ಟಿಪ್ಪುಕೊಡಗಿನ ಹಕ್ಕನ್ನು ಬಿಟ್ಟುಕೊಟ್ಟಿದ್ದ. ಅವರು ವಾಪಸಾದಾಗ ಅವರ ಕುಟುಂಬದವರೇ ಅವರನ್ನು ಸೇರಿಸಿಕೊಳ್ಳಲಿಲ್ಲ. ಕೊನೆಗೆ ಲಿಂಗಾಯತ ರಾಜ ಅವರಿಗೆ ಕೊಡಗಿನ 20 ಕಡೆಗಳಲ್ಲಿ ವಸತಿ ಕಲ್ಪಿಸಿದ. ಕೆಲ ಕೊಡವರು ಇಸ್ಲಾಂಗೆ ಮತಾಂತರ ಹೊಂದಿದ್ದು ನಿಜವಾದರೂ, ಸಂಖ್ಯೆ ಮಾತ್ರ ಕಡಿಮೆ. ಕೊಡವ ಮುಸ್ಲಿಮರು ಅಥವಾ ಜೆಮ್ಮಾ ಮಾಪಿಳ್ಳೆಗಳಾಗಿ ಇವರನ್ನು ಗುರುತಿಸಲಾಗುತ್ತದೆ. ಇಂದಿಗೂ ಕೊಡವ ಕುಟುಂಬಗಳ ಅಡ್ಡಹೆಸರುಗಳು ಇವರಿಗೆ ಬರುತ್ತವೆ. ಆದಾಗ್ಯೂ ಟಿಪ್ಪುವಿಗಿಂತ ಮುನ್ನ ಕೊಡಗಿನಲ್ಲಿ ಮುಸ್ಲಿಮರೇ ಇರಲಿಲ್ಲ ಎನ್ನುವುದು ಸರಿಯಲ್ಲ. ಮಡಿಕೇರಿಯಿಂದ 30 ಕಿಲೋಮೀಟರ್ ದೂರದ ಎಮ್ಮೆಮಡು ಎಂಬಲ್ಲಿ ಸೂಫಿ ಸಂತ ಸೂಫಿ ಶಾಹಿದ್ ಸಮಾಧಿ ಇದೆ. ಅಂದರೆ ಆಗಿನ ಕಾಲದಲ್ಲೇ ಮುಸ್ಲಿಂ ಇರುವಿಕೆಗೆ ಇದು ಸ್ಪಷ್ಟ ನಿದರ್ಶನ. 350 ವರ್ಷಗಳ ಹಿಂದೆ ಇಲ್ಲಿ ಈ ಸಂತ ಇದ್ದ ಎಂದು ದರ್ಗಾ ದಾಖಲೆಗಳು ಹೇಳುತ್ತವೆ. ಕೊಡವರ ಜತೆ ಆತ ನಿಕಟ ಸಂಬಂಧ ಹೊಂದಿದ್ದನ್ನೂ ಇದರಲ್ಲಿ ವಿವರಿಸಲಾಗಿದೆ.

ಹುಸೇನ್‌ಖಾನ್ ಲೊಹಾನಿ ಎಂಬ ಮುಸ್ಲಿಂ, ಕೊಡಗಿನ ವೀರ ರಾಜೇಂದ್ರ ಮಹಾರಾಜನ ಆಸ್ಥಾನದಲ್ಲಿ ಮುನ್ಷಿಯಾಗಿದ್ದರು. 18ನೆ ಶತಮಾನದ ಆರಂಭದಲ್ಲೇ ಉರ್ದು ಮಾತನಾಡುವ ಹಾಗೂ ಜಾಗೀರ್ ತುರ್ಕರು ಎಂದು ಕರೆಸಿಕೊಳ್ಳುತ್ತಿದ್ದ ಶ್ರೀಮಂತ ಮುಸ್ಲಿಮರು ಇದ್ದರು. ಅವರ ವಂಶಜರು ಇಂದಿಗೂ ಕೊಡಗಿನಲ್ಲಿದ್ದಾರೆ. ಕಿರ್ಮಾನಿ ಹೇಳಿದಂತೆ ಕೊಡವರ ಸ್ವಯಂಪ್ರೇರಿತ ಮತಾಂತರವಾಗಿದೆ. ಈ ಪ್ರದೇಶದಲ್ಲಿ ಕರಾವಳಿ ಕರ್ನಾಟಕ ಹಾಗೂ ಉತ್ತರ ಕೇರಳದಿಂದ ಬಂದ ಮುಸ್ಲಿಂ ವ್ಯಾಪಾರಿಗಳೂ ಇದ್ದರು.

ಮೂರನೆ ಆಂಗ್ಲೋ-ಮೈಸೂರು ಯುದ್ಧದ ಸೋಲಿನ ಬಳಿಕ ಟಿಪ್ಪು, ಶ್ರೀರಂಗಪಟ್ಟಣ ಒಪ್ಪಂದದಂತೆ ಕೊಡಗಿನ ಹಕ್ಕನ್ನು ಬಿಟ್ಟುಬಿಟ್ಟ. ಮೈಸೂರು ಸಾಮ್ರಾಜ್ಯಕ್ಕೆ ಕೊಡಗು ಎಷ್ಟು ಆಯಕಟ್ಟಿನ ಪ್ರದೇಶ ಎನ್ನುವುದು ಟಿಪ್ಪುಹೇಳಿಕೆಯಲ್ಲಿ ಸ್ಪಷ್ಟವಾಗುತ್ತದೆ. ಅವರು ಶ್ರೀರಂಗಪಟ್ಟಣವನ್ನು ಬಿಟ್ಟು ಏಕೆ ಕೊಡಗಿಗೆ ಆಗ್ರಹಿಸಿದರು ಎಂದು ಟಿಪ್ಪುಹೇಳಿದ್ದ. ಬಳಿಕ 1834ರಲ್ಲಿ ಬ್ರಿಟಿಷರು ಕೊಡಗನ್ನು ಪ್ರತ್ಯೇಕಿಸಿದರು. ಹಾಗಾದರೆ ಕೊಡವರಲ್ಲಿ ಟಿಪ್ಪುಬಗ್ಗೆ ಅಷ್ಟೊಂದು ಆಕ್ರೋಶ ಏಕೆ? ಬೆಂಗಳೂರಿನಲ್ಲಿರುವ ಒಂದು ಕೊಡವ ನಿಯತಕಾಲಿಕ ಅಂದಾಜು ಮಾಡುವಂತೆ ‘‘ಕೊಡವರು 19ನೆ ಶತಮಾನದಲ್ಲಿ ಬ್ರಿಟಿಷರ ಜತೆ ನಂಟು ಹೊಂದಿದ್ದರು. ಕೊಡಗು 1834ರಿಂದ 1947ರವರೆಗೆ ಬ್ರಿಟಿಷರ ನೇರ ಆಳ್ವಿಕೆಗೆ ಒಳಪಟ್ಟ ಪ್ರಾಂತವಾಗಿತ್ತು. ಬ್ರಿಟಿಷರಿಂದ ಸಾಕಷ್ಟು ಲಾಭ ಪಡೆದಿದ್ದ ಕೊಡವರಲ್ಲಿ, ಬ್ರಿಟಿಷರು ಈ ವಿಷಬೀಜ ಬಿತ್ತಿದರು’’ ಎಂದು ಕೊಡವ ಪತ್ರಕರ್ತರೊಬ್ಬರು ಹೇಳುತ್ತಾರೆ.

ಟಿಪ್ಪುಬಗ್ಗೆ ಭೀತಿ

ಟಿಪ್ಪುವನ್ನು ಖಳನಾಯಕನಾಗಿ ಬಿಂಬಿಸುವ ಪ್ರಯತ್ನ ಬ್ರಿಟಿಷರಿಂದ ಆರಂಭವಾಗಿ 19ನೆ ಶತಮಾನವಿಡೀ ಮುಂದುವರಿಯಿತು. ಕರ್ನಲ್ ವಿಲಿಯಂ ಕ್ರಿಕ್‌ಪ್ಯಾಟ್ರಿಕ್ ಹಾಗೂ ಮಾರ್ಕ್ ವಾಕ್ಸ್ ಅವರಂಥವರು ಟಿಪ್ಪುಮಿಲಿಟರಿ ಪ್ರಚಾರದ ಬಗ್ಗೆ ಕಟುವಾಗಿ ಬರೆದಿದ್ದಾರೆ. ರೆವರೆಂಡ್ ರಿಚರ್ 1870ರಲ್ಲಿ ಹೈದರಲಿಯನ್ನು ‘ತೋಳ’ ಎಂದು ಉಲ್ಲೇಖಿಸಿದ್ದಾರೆ. 1799ರಲ್ಲಿ ಟಿಪ್ಪುಪತನದ ಬಳಿಕ ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆ ಅವರಿಗೆ ಸರಳವಾಯಿತು ಹಾಗೂ ಭಾರತ ಉಪಖಂಡದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಪ್ರಾಬಲ್ಯ ಬೆಳೆಯಿತು.

ಟಿಪ್ಪುಬಗೆಗಿನ ಹೆಚ್ಚು ಪ್ರಚಲಿತ ಇತಿಹಾಸಗಾರ ಎನಿಸಿಕೊಂಡ ಕೇಟ್ ಬ್ರಿಟ್ಲ್‌ಬಂಕ್ ಹೇಳುವಂತೆ, ‘‘30 ವರ್ಷ ಕಾಲ ಮೊದಲು ಹೈದರಲಿ, ಬಳಿಕ ಟಿಪ್ಪು, ಬ್ರಿಟಿಷ್ ಸಾರ್ವಜನಿಕರ ಪ್ರಜ್ಞೆಯಲ್ಲಿ ಮುಂಚೂಣಿಯಲ್ಲಿದ್ದರು. ಅವರು ಜನರಲ್ ಹ್ಯಾರಿಸ್ ಪಡೆಗಳಿಗೆ ಸೋತು ಸಾಯುವ ಮುನ್ನ, ಟಿಪ್ಪುವಿನ ದ್ವೀಪ ರಾಜಧಾನಿಗೆ 1799ರಲ್ಲಿ ಮುತ್ತಿಗೆ ಹಾಕಿದ್ದರು. ಟಿಪ್ಪುಸುಲ್ತಾನ್ ಬ್ರಿಟನ್‌ನಲ್ಲಿ ಅತ್ಯಂತ ಖ್ಯಾತ ಭಾರತೀಯನೇ ವಿನಃ ವಿಲನ್ ಅಲ್ಲ’’

20ನೆ ಶತಮಾನದ ಆರಂಭದಲ್ಲೂ ಸ್ವಾತಂತ್ರ್ಯ ಹೋರಾಟಗಾರನಾಗಿ ಟಿಪ್ಪುಬೆಳಕಿಗೆ ಬಂದಿದ್ದ. ಮಹಾತ್ಮಗಾಂಧೀಜಿ ನಾಯಕತ್ವದಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟ ಮರುಹುಟ್ಟು ಪಡೆದಾಗ, ಟಿಪ್ಪು, ಬ್ರಿಟಿಷ್ ವಿರುದ್ಧದ ಹೋರಾಟದ ಐಕಾನ್ ಆಗಿದ್ದರು. ಗಾಂಧೀಜಿ ಸಂಪಾದಕರಾಗಿದ್ದ ಯಂಗ್ ಇಂಡಿಯಾದಲ್ಲಿ 1930ರಲ್ಲಿ ಪ್ರಕಟವಾದ ಲೇಖನದಲ್ಲಿ, ಫತೇಅಲಿ ಟಿಪ್ಪುಸುಲ್ತಾನ್‌ನನ್ನು ವಿದೇಶಿ ಇತಿಹಾಸಗಾರರು ಹಿಂದೂಗಳ ಮೇಲೆ ದೌರ್ಜನ್ಯ ಎಸಗಿದ ಮತಾಂಧ ಎಂದು ಬಿಂಬಿಸಿದ್ದಾರೆ. ಆದರೆ ಆತ ಅಂಥ ವ್ಯಕ್ತಿಯಲ್ಲ. ಬದಲಾಗಿ ಹಿಂದೂಗಳ ಜತೆ ಆತನ ಸಂಬಂಧ ಸೌಹಾರ್ದವಾಗಿತ್ತು ಎಂದು ವಿವರಿಸಲಾಗಿದೆ.

ಟಿಪ್ಪು ಇತಿಹಾಸ ತಜ್ಞ ಶೇಕ್ ಅಲಿಯವರು 2015ರಲ್ಲಿ ನೀಡಿದ ಒಂದು ಸಂದರ್ಶನದಲ್ಲಿ, ‘‘ಟಿಪ್ಪುವನ್ನು ಪಕ್ಷಪಾತಿ ಧಾರ್ಮಿಕ ಆಡಳಿತಗಾರ ಎಂದು ಬಿಂಬಿಸುವ ಪ್ರಯತ್ನ 1950ರ ದಶಕದಿಂದಲೂ ನಡೆದಿತ್ತು’’ ಎಂದು ಹೇಳಿದ್ದರು. 1980ರಲ್ಲಿ ‘ಟಿಪ್ಪು ಸುಲ್ತಾನ್ ಎಕ್ಸ್‌ರೇಡ್‌ಆನ್ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಪಫ್ಡ್ ಅಫ್ ನವಾಬ್’ ಎಂಬ ಕೃತಿಯನ್ನು ಐ.ಎಂ.ಮುತ್ತಣ್ಣ ಹೊರತಂದಿದ್ದಾರೆ. ಇದು ಟಿಪ್ಪುಬಗೆಗಿನ ತಪ್ಪುಕಲ್ಪನೆಗಳನ್ನು ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 700 ಪುಟಗಳ ಈ ಕೃತಿಯಲ್ಲಿ ಹಲವು ಅಂಶಗಳ ಉಲ್ಲೇಖವಿದ್ದರೂ ಈ ಬಗ್ಗೆ ಎರಡು ಅಂಶಗಳನ್ನು ಮಾತ್ರ ಇಲ್ಲಿ ವಿವರಿಸುತ್ತಿದ್ದೇನೆ.

ಮೊದಲನೆಯದಾಗಿ ಮುತ್ತಣ್ಣ ತಮ್ಮ ಕೃತಿಯನ್ನು ಬ್ರಿಟಿಷರಿಗೆ ಅರ್ಪಿಸಿದ್ದಾರೆ. ಅವರ ಪ್ರಕಾರ, ಬ್ರಿಟಿಷರು ಆಧುನಿಕ ಆಭಿವೃದ್ಧಿ, ಜ್ಞಾನ, ಶಿಕ್ಷಣ ಹಾಗೂ ಪ್ರಗತಿಯನ್ನು ಉದ್ಘಾಟಿಸಿದವರು. ದೇಶದ ಪ್ರಾಚೀನ ಹೆಮ್ಮೆ, ಧರ್ಮ ಹಾಗೂ ಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿದವರು. ಎರಡನೆಯದಾಗಿ ಇದಕ್ಕೆ ಮುನ್ನುಡಿ ಬರೆದವರು ಪುರುಷೋತ್ತಮ್ ನಾಗೇಶ್ ಓಕ್. ಇವರು ಭಾರತೀಯ ಇತಿಹಾಸ ಮರು ಬರವಣಿಗೆ ಸಂಸ್ಥೆಯ ಅಧ್ಯಕ್ಷ. (ತಾಜ್‌ಮಹಲ್ ವಾಸ್ತವವಾಗಿ ತೇಜೋಮಹಾಲಯ ಎಂಬ ಶಿವ ದೇಗುಲ ಎಂದು ಹೇಳಿಕೆ ನೀಡಿದವರು).

ಕಳೆದ ಕೆಲ ದಶಕಗಳಲ್ಲಿ ಬಿಜೆಪಿ ಕೊಡಗಿನಲ್ಲಿ ವ್ಯಾಪಕ ಬೆಂಬಲ ಪಡೆಯುತ್ತಿದೆ. ನಂಜಮ್ಮ ಹಾಗೂ ಚಿನ್ನಪ್ಪಅವರಂಥ ಜಾನಪದ ತಜ್ಞರು ಹೇಳುವಂತೆ ಕೊಡವರು ಹಿಂದೂಗಳಲ್ಲ. ಒಂದು ಬುಡಕಟ್ಟು ಜನಾಂಗ. ಇದು ಸಂಸ್ಕೃತೀಕರಣಗೊಂಡ ಸಮುದಾಯ ಎನ್ನುವುದನ್ನು ಮಾನವಶಾಸ್ತ್ರಜ್ಞ ಎಂ.ಎನ್.ಶ್ರೀನಿವಾಸ್ 1952ರಲ್ಲೇ ತಮ್ಮ ‘ರಿಲಿಜನ್ ಅಂಡ್ ಸೊಸೈಟಿ ಅಮಂಗ್ ದ ಕೂರ್ಗ್ಸ್ ಆಫ್ ಸೌತ್ ಇಂಡಿಯಾ’’ ಕೃತಿಯಲ್ಲಿ ಹೇಳಿದ್ದಾರೆ.

ಕೊಡವರು ಕೊಡಗಿನಲ್ಲಿ ಶೇ. 20ರಷ್ಟು ಇರುವ ಅಲ್ಪಸಂಖ್ಯಾತರು. ಆ ಭಾಗದ ಬಗ್ಗೆ ಐತಿಹಾಸಿಕ ಹಕ್ಕು ತಮಗೆ ಇದೆ ಎಂದು ಹಲವರು ಹೇಳುತ್ತಾರೆ. ಹೊಸ ವಲಸಿಗರು ಆ ಪ್ರದೇಶಕ್ಕೆ ಬರಲು ಕೊಡವರು ಅವಕಾಶ ನೀಡುವುದಿಲ್ಲ. ಬಹಳಷ್ಟು ಮಂದಿ ಹಿಂದೂಗಳು ಅಲ್ಲಿಗೆ ವಲಸೆ ಬಂದಿದ್ದು, ಮಾಪಿಳ್ಳೆ ಹಾಗೂ ಬ್ಯಾರಿ ವ್ಯಾಪಾರಿಗಳ ಬಗ್ಗೆ ಇವರು ಪೂರ್ವಾಗ್ರಹ ಹೊಂದಿದ್ದಾರೆ. ಆದ್ದರಿಂದ ಇವರು ಟಿಪ್ಪು ಬಗ್ಗೆ ಇತಿಹಾಸದ ಅಂಶಗಳ ಮೂಲಕ ಕೊಡವರಲ್ಲಿ ದ್ವೇಷಭಾವನೆ ಬೆಳೆಸಲು ಮುಂದಾಗಿದ್ದಾರೆ.

ಟಿಪ್ಪುವಿರುದ್ಧದ ಅಪಪ್ರಚಾರದ ಅಂಶಗಳನ್ನು ಗಮನಿಸಿದರೆ, ಟಿಪ್ಪುನರಮೇಧ ನಡೆಸಿದ ಬಗ್ಗೆಯಾಗಲೀ, ಕೊಡವರನ್ನು ಬಂಧಿಸಿದ ಬಗ್ಗೆ ಯಾವ ಪುರಾವೆಯೂ ಇಲ್ಲ. ಅಂತೆಯೇ ಶ್ರೀರಂಗಪಟ್ಟಣಕ್ಕೆ ಬಂಧಿಸಿ ಒಯ್ದ ಕೊಡವರ ಸಂಖ್ಯೆ ಕೆಲ ನೂರು ಇರಬಹುದು. ಕೆಲ ಮತಾಂತರಗಳು ನಡೆದಿರಬಹುದು. ಇದಕ್ಕೆ ಧಾರ್ಮಿಕ ಕಾರಣದಿಂದ ಹೊರತಾಗಿ, ಪದೇ ಪದೇ ದಂಗೆಗಳನ್ನು ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಪ್ರತೀಕಾರದ ಕ್ರಮವಾಗಿ ಮತಾಂತರ ಮಾಡಿರಬಹುದು ಎಂದು ಇತಿಹಾಸಗಾರರು ಅಭಿಪ್ರಾಯಪಡುತ್ತಾರೆ. ಮುಸ್ಲಿಂ ಅರಸನಾದರೂ ಆತನ ಸಾಮ್ರಾಜ್ಯದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರು. ಜತೆಗೆ ಟಿಪ್ಪುಹಲವು ಮಂದಿ ಹಿಂದೂಗಳನ್ನು ಅತ್ಯುನ್ನತ ಹುದ್ದೆಗಳಿಗೆ ನೇಮಕ ಮಾಡಿಕೊಂಡಿದ್ದ ಹಾಗೂ ಹಲವು ದೇಗುಲಗಳಿಗೆ ನೆರವು ನೀಡಿದ್ದ.

ಟಿಪ್ಪುಕನಸು

1799ರ ಮೇ 4ರಂದು ಬ್ರಿಟಿಷ್ ಹಾಗೂ ಭಾರತೀಯ ಸೈನಿಕರನ್ನು ಹೊಂದಿದ್ದ ಈಸ್ಟ್‌ಇಂಡಿಯಾ ಕಂಪೆನಿಯ ಪಡೆಗಳು ಕಾವೇರಿ ನದಿ ದಾಟಿಕೊಂಡು ಬಂದು ಶ್ರೀರಂಗಪಟ್ಟಣ ಕೋಟೆಯ ಅವಳಿ ರಕ್ಷಣಾ ಗೋಪುರಗಳನ್ನು ಭೇದಿಸಿದರು. ಸಾಹಸಿ ಟಿಪ್ಪುವನ್ನು ನಾಲ್ಕನೇ ಯುದ್ಧದಲ್ಲಿ ಬ್ರಿಟಿಷರು ಸೋಲಿಸಿ ಹತ್ಯೆ ಮಾಡಿದರು. ಬಳಿಕ ಕರ್ನಲ್ ಕ್ರಿಕ್‌ಪ್ಯಾಟ್ರಿಕ್ ಅವರು ಟಿಪ್ಪುಶಯನಗೃಹದಲ್ಲಿ ಒಂದು ಕೈಪಿಡಿಯನ್ನು ಪತ್ತೆ ಮಾಡಿದರು. ಆಗಷ್ಟೇ ಕೊಲ್ಲಲ್ಪಟ್ಟ ರಾಜನ ಕೈಬರಹ ಅದಾಗಿತ್ತು. ಇದರಲ್ಲಿ ಟಿಪ್ಪುವಿನ ಕನಸುಗಳನ್ನು ಪರ್ಶಿಯನ್ ಭಾಷೆಯಲ್ಲಿ ದಾಖಲಿಸಲಾಗಿತ್ತು. ಟಿಪ್ಪುವಿನ 37 ಕನಸುಗಳು ಆತನ ವ್ಯಕ್ತಿತ್ವದ ನೈಜ ಚಿತ್ರಣ ನೀಡುತ್ತವೆ. ಇದರಲ್ಲಿ 22ನೆ ಕನಸಿನಲ್ಲಿ ಅಪೂರ್ವ ಆದರ್ಶ ಎಂದು ಶೀರ್ಷಿಕೆ ಇದ್ದು, ಇದನ್ನು 1795ರಿಂದ 1796ರ ಅವಧಿಯಲ್ಲಿ ಬರೆದಿರಬೇಕು ಎಂದು ಅಂದಾಜು ಮಾಡಲಾಗಿದೆ. ಇದು ಟಿಪ್ಪು ಮತಾಂಧ ಎನ್ನುವ ವಾದಕ್ಕೆ ಸವಾಲಿನ ರೀತಿಯಲ್ಲಿದ್ದು, ಇದನ್ನು ಯಥಾವತ್ತಾಗಿ ಉಲ್ಲೇಖಿಸುವುದು ಉಚಿತ. ‘‘ಅದು ದೊಡ್ಡ ದೇವಾಲಯ ಇರಬೇಕು. ಅದರ ಹಿಂಬದಿಗೆ ಸ್ವಲ್ಪಹಾನಿಯಾಗಿದೆ. ಇದರಲ್ಲಿ ಹಲವು ದೊಡ್ಡ ಮೂರ್ತಿಗಳಿವೆ. ಇತರ ಕೆಲವರ ಜತೆ ನಾನು ದೇವಸ್ಥಾನಕ್ಕೆ ಹೋಗಿದ್ದೆ. ಈ ಮೂರ್ತಿಗಳು ಜೀವಂತ ಮನುಷ್ಯರಂತಿದ್ದು, ಅವರ ಕಣ್ಣುಗಳು ಚಲಿಸುತ್ತಿವೆ. ಮೂರ್ತಿಗಳ ಕಣ್ಣುಗಳು ಜೀವಂತ ಮನುಷ್ಯರಂತೆ ಚಲಿಸುತ್ತಿರುವುದು ನೋಡಿ, ಅದಕ್ಕೆ ಏನು ಕಾರಣ ಎಂದು ಅಚ್ಚರಿಯಾಯಿತು. ಅವರನ್ನು ಕೇಳಿದೆ. ಕೊನೆಯ ಸಾಲಿನಲ್ಲಿ ಮಹಿಳೆಯರ ಮೂರ್ತಿಗಳಿದ್ದವು. ಅವರು ಇಬ್ಬರೂ ನಿಜವಾದ ಮಹಿಳೆಯರು. ಉಳಿದ ಎಲ್ಲವೂ ಮೂರ್ತಿ ಎನ್ನುವುದನ್ನು ತಿಳಿಸಿದರು. ನಾವು ದೀರ್ಘಕಾಲದಿಂದ ದೇವರನ್ನು ಪ್ರಾರ್ಥಿಸುತ್ತಿದ್ದೇವೆ. ಪ್ರತಿಯೊಬ್ಬರೂ ಪರಿಪೂರ್ಣರಾಗಬೇಕು ಎಂದು ಹೇಳಿದರು. ನೀವು ದೇವರ ಧ್ಯಾನದಲ್ಲೇ ಇರಿ ಎಂದು ಅವರಿಗೆ ಹೇಳಿದೆ. ಅಷ್ಟು ಹೇಳಿ ಶಿಥಿಲವಾದ ಕಟ್ಟಡವನ್ನು ದುರಸ್ತಿ ಮಾಡಲು ಹೇಳಿದೆ. ಆ ವೇಳೆಗೆ ನಾನು ಎಚ್ಚರಗೊಂಡೆ.’’

Writer - ವಿಕಾರ್ ಅಹ್ಮದ್ ಸಯೀದ್

contributor

Editor - ವಿಕಾರ್ ಅಹ್ಮದ್ ಸಯೀದ್

contributor

Similar News