×
Ad

ರಾಷ್ಟ್ರೀಯ ಭದ್ರತಾ ಪಡೆ ವೆಬ್‌ಸೈಟ್‌ಗೇ ಕನ್ನ!

Update: 2017-01-02 09:08 IST

ಹೊಸದಿಲ್ಲಿ, ಜ.2: ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ವೆಬ್‌ಸೈಟ್‌ಗೇ(www.nsg.gov.in)  ಹ್ಯಾಕರ್‌ಗಳು ಕನ್ನ ಹಾಕಿ ಎನ್‌ಎಸ್‌ಜಿ ಹೋಮ್ ಪೇಜ್ ಅನ್ನು ವಿರೂಪಗೊಳಿಸಿದ ಘಟನೆ ನಡೆದಿದೆ. ಪಾಕಿಸ್ತಾನದ ಜತೆ ನಂಟು ಹೊಂದಿರುವ ಹ್ಯಾಕರ್‌ಗಳು ಈ ಕೃತ್ಯ ಎಸಗಿರಬೇಕು ಎಂದು ಶಂಕಿಸಲಾಗಿದೆ. ವೆಬ್‌ಸೈಟ್‌ನ ಮುಖಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸಿರುವ ಹಾಗೂ ಭಾರತ ವಿರೋಧಿ ಘೋಷಣೆಗಳನ್ನು ಪ್ರಕಟಿಸಲಾಗಿದೆ.

ಹ್ಯಾಕರ್‌ಗಳು ತಮ್ಮನ್ನು "ಅಲೋನ್ ಇಂಜೆಕ್ಟರ್" ಎಂದು ಹೇಳಿಕೊಂಡಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷವಾಕ್ಯವನ್ನೂ ಹೋಂಪೇಜ್‌ನಲ್ಲಿ ಹಾಕಿದ್ದಾರೆ. ಭಾನುವಾರ ಮುಂಜಾನೆ ಹ್ಯಾಕಿಂಗ್ ಆಗಿರುವುದು ಎನ್‌ಎಸ್‌ಜಿ ಸಿಬ್ಬಂದಿಗೆ ಗೊತ್ತಾಗಿದೆ. ತಕ್ಷಣ ಭಯೋತ್ಪಾದಕ ನಿಗ್ರಹ ಪಡೆ ವೆಬ್‌ಸೈಟ್ ಅನ್ನು ಬ್ಲಾಕ್ ಮಾಡಿದೆ. ಅಧಿಕಾರಿಗಳು ಹೇಳುವಂತೆ ಪಾಕಿಸ್ತಾನದ ಜತೆ ನಂಟು ಹೊಂದಿರುವ ಹ್ಯಾಕರ್‌ಗಳು ಈ ಕೃತ್ಯ ಎಸಗಿದ್ದು, ಈ ಬಗ್ಗೆ ವಿವರಗಳನ್ನು ಕಲೆಹಾಕಲಾಗುತ್ತಿದೆ. ಹ್ಯಾಕರ್‌ಗಳು ಬೇರೆ ದೇಶಗಳಲ್ಲಿ ವಾಸವಿದ್ದು, ಪಾಕಿಸ್ತಾನದ ಗೂಢಚರ್ಯ ಸಂಸ್ಥೆ ಐಎಸ್‌ಐಗೆ ಕೆಲಸ ಮಾಡುತ್ತಿದ್ದಾರೆ ಎಂದು ಶಂಕಿಸಲಾಗಿದೆ.

ಎನ್‌ಎಸ್‌ಜಿ ಕೇಂದ್ರ ಕಚೇರಿ ಮನೆಸರ್‌ನಿಂದ ಈ ವೆಬ್‌ಸೈಟ್ ನಿರ್ವಹಿಸಲಾಗುತ್ತಿದ್ದು, ಇದರಲ್ಲಿ ಪಡೆಯ ಬಗ್ಗೆ ಮೂಲಭೂತ ಮಾಹಿತಿ, ಅದರ ಮೂಲ, ಕಾರ್ಯಾಚರಣೆಗಳ ಬಗ್ಗೆ ವಿವರಗಳಿವೆ. ಈ ಹ್ಯಾಕಿಂಗ್ ಬಗ್ಗೆ ನ್ಯಾಷನಲ್ ಇನ್ಫಾರ್ಮೇಟಿಕ್ ಸೆಂಟರ್‌ಗೆ ಮಾಹಿತಿ ನೀಡಲಾಗಿದ್ದು, ಇಂಥ ಕೃತ್ಯ ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News