ಕರೀನಾ ಕಪೂರ್ ಖಾನ್ ಐ-ಟಿ ಖಾತೆ ಹ್ಯಾಕ್: ಆರೋಪಿಯ ಸೆರೆ
ಮುಂಬೈ,ಜ.3: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರ ಐ-ಟಿ ಅಕೌಂಟ್‌ನ್ನು ಹ್ಯಾಕ್ ಮಾಡಿ ಆಕೆಯ ಐಟಿ ಘೋಷಣಾ ಪತ್ರವನ್ನು ತುಂಬಿಸಿದ್ದ 26ರ ಹರೆಯದ ವ್ಯಕ್ತಿಯೊಬ್ಬನನ್ನು ಸೈಬರ್ ಪೊಲೀಸರು ಸೆರೆ ಹಿಡಿದಿದ್ದಾರೆ.
ಬಂಧಿತ ವ್ಯಕ್ತಿ ಕರೀನಾ ಕಪೂರ್‌ರ ಕಟ್ಟಾ ಅಭಿಮಾನಿ ಹಾಗೂ ಛತ್ತೀಸ್‌ಗಢದಲ್ಲಿ ಅರೆ ಸೇನಾಪಡೆಯಲ್ಲಿ ಸೈನಿಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮನೀಶ್ ತಿವಾರಿ ಎಂದು ಗುರುತಿಸಲಾಗಿದೆ.
ಆರೋಪಿ ತಿವಾರಿ ಕಳೆದ ಆಗಸ್ಟ್‌ನಲ್ಲಿ ಇಂಟರ್‌ನೆಟ್‌ನಲ್ಲಿ ನಟಿ ಕರೀನಾರ ಪೋನ್ ನಂಬರ್‌ನ್ನು ಶೋಧಿಸಿದ್ದ. ಬಳಿಕ ಆಕೆಯ ಪ್ಯಾನ್ ವಿವರಗಳನ್ನು ಸಂಗ್ರಹಿಸಿದ್ದ. ನಟಿಯ ಆದಾಯ ತೆರಿಗೆ ಖಾತೆಯನ್ನು ಹ್ಯಾಕ್ ಮಾಡಿದ್ದ ತಿವಾರಿ 2016-17ರಲ್ಲಿ ನಟಿಯ ಡಿಕ್ಲರೇಶನ್ ಅರ್ಜಿಯನ್ನು ತುಂಬಿಸಿದ್ದ.
ಕರೀನಾರ ಚಾರ್ಟರ್ಡ್ ಅಕೌಂಟೆಂಟ್(ಸಿಎ) ಪ್ರಕಾಶ್ ತಕ್ಕರ್ ಕರೀನಾರ ಐಟಿ ಡಿಕ್ಲರೇಶನ್ ಅರ್ಜಿ ತುಂಬಿಸಿರುವುದನ್ನು ಪತ್ತೆ ಹಚ್ಚಿದ್ದರು. ಈ ಬಗ್ಗೆ ಶಂಕೆ ೆವ್ಯಕ್ತಪಡಿಸಿದ್ದರು.
ಜಂಟಿ ಪೊಲೀಸ್ ಕಮಿಶನರ್(ಕ್ರೈಮ್)ಸಂಜಯ್ ಸಕ್ಸೇನಾ ನೇತೃತ್ವದ ತಂಡ ರವಿವಾರ ತಿವಾರಿಯನ್ನು ಛತ್ತಿಸ್‌ಗಢದಲ್ಲಿ ಪತ್ತೆ ಹಚ್ಚಿ ನಗರಕ್ಕೆ ಕರೆ ತಂದಿದ್ದರು.