ಈ ವ್ಯಕ್ತಿ ಗಾಂಜಾ ಬೆಳೆಯಲು ಆಯ್ಕೆ ಮಾಡಿದ ಜಾಗ ಯಾವುದೆಂದು ನೀವು ಊಹಿಸಲೂ ಸಾಧ್ಯವಿಲ್ಲ
ಹೈದರಾಬಾದ್, ಜ.3: ಹೈದರಾಬಾದ್ ನಗರದ ಯುವಕನೊಬ್ಬ ಗಾಂಜಾ ಬೆಳೆಯಲು ಯಾರೂ ಊಹಿಸಲೂ ಸಾಧ್ಯವಾಗದ ಸ್ಥಳವೊಂದನ್ನು ಆಯ್ಕೆ ಮಾಡಿದ್ದ. ಆ ಸ್ಥಳ ಯಾವುದೆಂದು ಕೇಳಿದವರಿಗೆ ಎಂಥವರಿಗೂ ಆಶ್ಚರ್ಯವಾಗದೇ ಇರಬಹುದು. ಆತ ಗಾಂಜಾ ಬೆಳೆದಿದ್ದು ತನ್ನ ಮೂರು ಬೆಡ್ ರೂಮಿನ ಫ್ಲ್ಯಾಟ್ ನಲ್ಲಿ.
ಸಯ್ಯದ್ ಹುಸೇನ್ (33) ಎಂಬ ಈ ವ್ಯಕ್ತಿಯನ್ನು ಸೋಮವಾರ ಪೊಲೀಸರು ಬಂಧಿಸಿದ್ದು ಆತನ ಫ್ಲ್ಯಾಟ್ ನಿಂದ ಡಝನ್ ಗಟ್ಟಲೆ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 8.6 ಕೆಜಿ ಗಾಂಜಾ, 40 ಮಡಿಕೆಗಳಲ್ಲಿದ್ದ ಗಾಂಜಾ ಗಿಡಗಳು, ಒಂದು ದ್ವಿಚಕ್ರ ವಾಹನ ಮತ್ತು ರೂ.32.200 ನಗದು ಹಣವನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ.
ವಿಶಾಖಪಟ್ಣಂ, ಒಡಿಶಾ ಗಡಿ ಪ್ರದೇಶಗಳಿಂದ ಇತರೆಡೆಗೆ ಗಾಂಜಾ ಸಾಗಿಸಲು ಇರುವ ಹಲವಾರು ಅಡೆತಡೆಗಳನ್ನು ಗಮನಿಸಿದ್ದ ಆತ ಗಾಂಜಾವನ್ನು ತನ್ನ ಫ್ಲ್ಯಾಟ್ ನಲ್ಲಿಯೇ ಬೆಳೆಸುವ ಕಾರ್ಯಕ್ಕೆ ಕೈ ಹಾಕಿದ್ದ. ಮೂರು ತಿಂಗಳ ಹಿಂದೆ ಆ ನಿಟ್ಟಿನಲ್ಲಿ ತನ್ನ ಅಮೆರಿಕನ್ ಸ್ನೇಹಿತ ಗಾರಿತ್ ಕ್ರಿಸ್ಟೋಫರ್ ಸಹಾಯ ಪಡೆದಿದ್ದ. ಮೇಲಾಗಿ ಯುಟ್ಯೂಬ್ ಟ್ಯುಟೋರಿಯಲ್ ವೀಡಿಯೋಗಳ ಮೂಲಕ ಮಾಹಿತಿ ಪಡೆದು ಗಾಂಜಾ ಬೆಳೆಗಳನ್ನು ತನ್ನ ಫ್ಲ್ಯಾಟ್ ನಲ್ಲಿಯೇ ಬೆಳೆಸಿದ್ದ. ಸೂರ್ಯನ ಬೆಳಕಿಗೆ ಪರ್ಯಾಯವಾಗಿ ಎಲ್ ಇಡಿ ಲೈಟ್ ಗಳನ್ನು ಅಳವಡಿಸಿದ ಆತ ಬೆಳೆಗಳಿಗೆ ಅಗತ್ಯ ತಾಪಮಾನವಿರುವಂತೆ ಮಾಡಲು ಹವಾನಿಯಂತ್ರಣ ವ್ಯವಸ್ಥೆ ಕೂಡ ಮಾಡಿದ್ದ. ಗಾಂಜಾ ಬೆಳೆಗಳು ತಮ್ಮ ಕೊನೆಯ ಹಂತದಲ್ಲಿ ಒಂದು ವಿಧದ ಪರಿಮಳ ಸೂಸುವುದರಿಂದ ಇದನ್ನೂ ನಿವಾರಿಸಲುವಿವಿಧ ಕ್ರಮ ಕೈಗೊಂಡಿದ್ದನಾತ, ಎಂದು ದಾಳಿ ನಡೆಸಿದ್ದ ಕಾರ್ಯಪಡೆಯ ಹೆಚ್ಚುವರಿ ಡಿಸಿಪಿ ಎನ್ ಕೋತಿ ರೆಡ್ಡಿ ತಿಳಿಸಿದ್ದಾರೆ.