ನೋಟು ರದ್ದತಿ ಆಗಿ ತಿಂಗಳು ಎರಡಾದರೂ ಎಟಿಎಂ ಬಳಕೆ ದುಸ್ತರ, ದುಬಾರಿ

Update: 2017-01-03 07:28 GMT

ಹೊಸದಿಲ್ಲಿ, ಜ.3: ನೋಟು ಅಮಾನ್ಯೀಕರಣಗೊಂಡು ಹತ್ತಿರ ಹತ್ತಿರ ಎರಡು ತಿಂಗಳಾಗುತ್ತಾ ಬಂದಿದೆ. ಆದರೆ ಎಟಿಎಂ ಬಳಕೆದಾರ ಹಾಗೂ ಡೆಬಿಟ್ ಕಾರ್ಡ್ ವ್ಯವಹಾರ ಶುಲ್ಕವನ್ನು ರಿಸರ್ವ್ ಬ್ಯಾಂಕ್ ಇನ್ನೂ ರದ್ದುಗೊಳಿಸಿಲ್ಲ. ಈ ಹಿಂದೆ ಎಟಿಎಂ ವ್ಯವಹಾರ ಶುಲ್ಕ ರದ್ದತಿಯನ್ನು ಡಿಸೆಂಬರ್ 31ರ ನಂತರವೂ ಮುಂದುವರಿಸಿಕೊಂಡು ಹೋಗಬಹುದು ಎಂದುಕೊಂಡಿದ್ದ ಜನರಿಗೆ ನಿರಾಸೆಯಾಗಿದೆ. ಆದರೆ ರಿಸರ್ವ್ ಬ್ಯಾಂಕ್ ಈ ಬಗ್ಗೆ ಮೌನವಾಗಿರುವುದರಿಂದ ಎಟಿಎಂ ಬಳಕೆ ದರಗಳನ್ನು ಬ್ಯಾಂಕುಗಳು ಗ್ರಾಹಕರಿಗೆ ವಿಧಿಸಲು ಆರಂಭಿಸಿವೆ.

ಟ್ರಾನ್ಸಾಕ್ಷನ್ ಪ್ರೊಸೆಸಿಂಗ್ ಸರ್ವಿಸ್ ಕಂಪೆನಿ ಎಫ್ ಎಸ್ ಎಸ್‌ ಅಧ್ಯಕ್ಷ ವಿಬಾಲಸುಬ್ರಹ್ಮಣ್ಯಂ ಪ್ರಕಾರ ಮೊದಲ ಐದು ಟ್ರಾನ್ಸಾಕ್ಷನ್ ಉಚಿತವಾಗಿದ್ದರೆ, ನಂತರದ ಟ್ರಾನ್ಸಾಕ್ಷನ್ ಗಳಿಗೆ ಅನ್ವಯವಾಗುವ ದರಗಳು ಸಂಬಂಧಿತ ಬ್ಯಾಂಕ್ ಹಾಗೂ ಕಾರ್ಡ್ ಮೇಲೆ ಅವಲಂಬಿತವಾಗಿದೆ.

ಇತರ ಬ್ಯಾಂಕುಗಳ ಎಟಿಎಂಗಳನ್ನು ಬಳಸುವ ಗ್ರಾಹಕರಿಗೆ ಎಸ್ ಬಿ ಐ, ಪಿ ಎನ್ ಬಿ ಹಾಗೂ ಐಸಿಐಸಿಐ ಬ್ಯಾಂಕುಗಳು ಅಮಾನ್ಯೀಕರಣದ ಮೊದಲು ಪ್ರತಿ ಟ್ರಾನ್ಸಾಕ್ಷನ್ ಗೆ 15 ರೂಪಾಯಿ ವಿಧಿಸುತ್ತಿದ್ದವು. ಇತರ ಬ್ಯಾಂಕುಗಳು 20 ರೂಪಾಯಿ ವಿಧಿಸುತ್ತಿದ್ದವು. ಆದರೆ ನೋಟು ಅಮಾನ್ಯೀಕರಣದ ಸಂದರ್ಭ ಮರ್ಚಂಟ್ ಡಿಸ್ಕೌಂಟ್ ರೇಟ್ ರದ್ದುಗೊಳಿಸಿದ್ದರೂ ಹೆಚ್ಚಿನ ಗ್ರಾಹಕರಿಗೆ ಅದರ ಸಂಪೂರ್ಣ ಪ್ರಯೋಜನ ಸಿಕ್ಕಿರಲಿಲ್ಲ. ಡಿಸೆಂಬರ್ 31ರ ತನಕ ಎಲ್ಲಾ ಬ್ಯಾಂಕುಗಳೂ ಟ್ರಾನ್ಸಾಕ್ಷನ್ ಶುಲ್ಕವನ್ನು ವಿಧಿಸದೇ ಇದ್ದರೂ, ಚಿನ್ನದಂಗಡಿಗಳಲ್ಲಿ ಹಾಗೂ ಟೆಕ್ಸ್ ಟೈಲ್ ಮಳಿಗೆಗಳಲ್ಲಿ ಕಾರ್ಡ್ ಉಪಯೋಗಿಸುವಾಗ ಅವರಿಂದ ಟ್ರಾನ್ಸಾಕ್ಷನ್ ದರ ಸಂಗ್ರಹಿಸಲಾಗುತ್ತಿತ್ತೆಂದು ಹಲವರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News