×
Ad

ನಿತೀಶ ಕುಮಾರ್ ಆಸ್ತಿಯಲ್ಲಿ ದನಕರುಗಳು: ಅಪ್ಪನಿಗಿಂತ ಮಗನೇ ಹೆಚ್ಚು ಶ್ರೀಮಂತ

Update: 2017-01-03 18:17 IST

ಪಾಟ್ನಾ,ಜ.3: ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ್ ಅವರ ಆಸ್ತಿಯ ವಿವರಗಳನ್ನು ಅವರ ಕಚೇರಿಯು ಘೋಷಿಸಿದ್ದು, ಒಂದು ಲ.ರೂ.ಗೂ ಅಧಿಕ ವೌಲ್ಯದ ಹಸುಗಳು ಮತ್ತು ಕರುಗಳು ಇದರಲ್ಲಿ ಸೇರಿವೆ. ಆದರೆ ನಿತೀಶ್‌ರ ಏಕೈಕ ಪುತ್ರ ನಿಶಾಂತ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ ಅವರು ಮುಖ್ಯಮಂತ್ರಿಗಿಂತ ಹೆಚ್ಚಿನ ಆಸ್ತಿಯ ಮಾಲಕರಾಗಿದ್ದಾರೆ.

ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸದಸ್ಯರು 2016ನೇ ಸಾಲಿಗೆ ಘೋಷಿಸಿರುವ ಆಸ್ತಿ ವಿವರಗಳಂತೆ ನಿಶಾಂತ್ ಕುಮಾರ್ 1.11 ಕೋ.ರೂ.ವೌಲ್ಯದ ಆಸ್ತಿಯನ್ನು ಹೊಂದಿದ್ದರೆ, ನಗದು, ಬ್ಯಾಂಕ್ ಠೇವಣಿಗಳು, ಒಂದು ಫೋರ್ಡ್ ಕಾರು, ಒಂದು ವ್ಯಾಯಾಮಕ್ಕೆ ಬಳಸುವ ಸೈಕಲ್ ಮತ್ತು ದಿಲ್ಲಿಯಲ್ಲಿರುವ ಒಂದು ಫ್ಲಾಟ್ ಸೇರಿದಂತೆ ನಿತೀಶರ ಆಸ್ತಿಯ ವೌಲ್ಯ 56 ಲ.ರೂ.ಮಾತ್ರ.

ನಿತೀಶ ಒಟ್ಟು 1.45 ಲ.ರೂ.ವೌಲ್ಯದ 10 ಹಸುಗಳು ಮತ್ತು ಐದು ಕರುಗಳನ್ನು ಹೊಂದಿದ್ದಾರೆ.

ಲಾಲು ಪ್ರಸಾದ್ ಯಾದವ ಮತ್ತು ಅವರ ಪತ್ನಿ ರಬ್ರಿದೇವಿ ಅವರಂತೆ ನಿತೀಶ ಕೂಡ ದನಕರುಗಳನ್ನು ಹೊಂದಿದ್ದಾರೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ ಎಂದು ಹಿರಿಯ ಜೆಡಿಎಸ್ ನಾಯಕರೋರ್ವರು ತಿಳಿಸಿದರು.

 ನಿತೀಶರ ಸಮ್ಮಿಶ್ರ ಸರಕಾರದಲ್ಲಿ ಲಾಲು ಪ್ರಸಾದರ ಹಿರಿಯ ಪುತ್ರ ತೇಜಪ್ರತಾಪ್ ಯಾದವ ಅರೋಗ್ಯ ಸಚಿವರಾಗಿದ್ದರೆ, ಕಿರಿಯ ಪುತ್ರ ತೇಜಸ್ವಿ ಾದವ ಉಪ ಮುಖ್ಯಮಂತ್ರಿಯಾಗಿದ್ದಾರೆ.

ತೇಜಸ್ವಿ ಯಾದವ 1.28 ಕೋ.ರೂ ಮತ್ತು ತೇಜಪ್ರತಾಪ್ 1.24 ಕೋ.ರೂ.ವೌಲ್ಯದ ಆಸ್ತಿಗಳನ್ನು ಹೊಂದಿದ್ದಾರೆ.

ತಾನು ಮತ್ತು ತನ್ನ ಸಂಪುಟದ ಸದಸ್ಯರು ಪ್ರತಿ ವರ್ಷ ಡಿ.31ರಂದು ತಮ್ಮ ಆಸ್ತಿಗಳನ್ನು ಘೋಷಿಸುವುದನ್ನು ನಿತೀಶ ಕುಮಾರ್ 2010ರಿಂದ ಕಡ್ಡಾಯಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News