ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿ ಇಂದು ಘೋಷಣೆ
ಹೊಸದಿಲ್ಲಿ,ಜ.4: ಪಂಚ ರಾಜ್ಯಗಳ ಅಸೆಂಬ್ಲಿ ಚುನಾವಣೆಯ ವೇಳಾಪಟ್ಟಿಯಲ್ಲಿ ಇಂದು ಪ್ರಕಟವಾಗಲಿದೆ. ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ, ಪಂಜಾಬ್, ಉತ್ತರಖಂಡ, ಮಣಿಪುರ ಹಾಗೂ ಗೋವಾ ರಾಜ್ಯಗಳಲ್ಲಿ ಎಲ್ಲ ಕಾನೂನು-ಸುವ್ಯವಸ್ಥೆಗಳ ಬಗ್ಗೆ ಚರ್ಚಿಸಲು ಚುನಾವಣಾ ಆಯೋಗ ಮುಖ್ಯ ಚುನಾವಣಾಧಿಕಾರಿಗಳ ಸಭೆಯನ್ನು ಕರೆದಿದೆ.
ಕೆಲವು ನಾಗಾ ಬಣಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿರುವ ಕಾರಣ ಮಣಿಪುರದ ಕಾನೂನು ಸುವ್ಯವಸ್ಥೆಯ ಬಗ್ಗೆ ಚುನಾವಣಾ ಆಯೋಗ ಹೆಚ್ಚು ಗಮನ ಹರಿಸಲಿದೆ ಎಂದು ಮೂಲಗಳು ತಿಳಿಸಿವೆ.
ಐದು ರಾಜ್ಯಗಳ ಚುನಾವಣಾಧಿಕಾರಿಗಳ ಸಭೆಯಲ್ಲಿ ಆಯಾ ರಾಜ್ಯಗಳ ಕಾನೂನು ಹಾಗೂ ಸುವವ್ಯಸ್ಥೆ, ಚುನಾವಣಾ ಸಿಬ್ಬಂದಿಗಳ ನಿಯೋಜನೆ, ಸುರಕ್ಷತೆ ಹಾಗೂ ಎಲೆಕ್ಟ್ರಾನಿಕ್ ವೋಟ್ ಯಂತ್ರಗಳು ಹಾಗೂ ಮಾದರಿ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿಗೆ ಸಂಬಂಧ ಚರ್ಚೆ ನಡೆಯಲಿದೆ.
ಮಣಿಪುರದಲ್ಲಿ ಯುನೈಟೆಡ್ ನಾಗಾ ಕೌನ್ಸಿಲ್ ನ್ಯಾಶನಲ್ ಹೈವೆಯನ್ನು ತಡೆದು ನಡೆಸುತ್ತಿರುವ ಪ್ರತಿಭಟನೆ ಇದೀಗ ನಿಯಂತ್ರಣಕ್ಕೆ ಬರುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯ ಚುನಾವಣಾ ಆಯೋಗಕ್ಕೆ ನೀಡಿರುವ ವರದಿಯಲ್ಲಿ ತಿಳಿಸಿದೆೆ.
ಚುನಾವಣಾ ಆಯೋಗ ಸ್ವತಂತ್ರವಾಗಿ ಮಣಿಪುರದ ಪರಿಸ್ಥಿತಿಯನ್ನು ಅವಲೋಕನ ನಡೆಸಿ ಚುನಾವಣೆಯು ಸರಾಗವಾಗಿ ನಡೆಯಲು ವ್ಯವಸ್ಥೆ ಮಾಡಲಿದೆ ಎಂದು ನ್ಯೂಸ್ ಏಜೆನ್ಸಿ ಹೇಳಿದೆ.
ಇದೇ ವೇಳೆ, ಕೇಂದ್ರ ಗೃಹ ಸಚಿವಾಲಯ ಮುಂಬರುವ ಐದು ರಾಜ್ಯಗಳ ಚುನಾವಣೆಗೆ ಸುಮಾರು 85,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಿದೆ. ಚುನಾವಣಾ ಆಯೋಗದೊಂದಿಗೆ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮಹೆರಿಶಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಐದು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆ ಸಾಂಗವಾಗಿ ನೆರವೇರಲು ಸುಮಾರು 750 ಪ್ಯಾರಾಮಿಲಿಟರಿ ತುಕಡಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ.