×
Ad

ಬಿಎಸ್ಪಿಯಿಂದ ದಾಖಲೆ ಪ್ರಮಾಣದಲ್ಲಿ ಮುಸ್ಲಿಂ ಅಭ್ಯರ್ಥಿಗಳು ಕಣಕ್ಕೆ

Update: 2017-01-04 11:06 IST

ಲಕ್ನೌ, ಜ.4: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಬಹುಜನ ಸಮಾಜವಾದಿ ಪಕ್ಷ ದಾಖಲೆ ಪ್ರಮಾಣದಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಈ ಬಾರಿ ಪಕ್ಷ 97 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಿದ್ದು, ಈ ಸಂಖ್ಯೆ 2012ನೆ ಚುನಾವಣೆಯಲ್ಲಿ ಅವಕಾಶ ನೀಡಲಾಗಿದ್ದ ಮುಸ್ಲಿಂ ಅಭ್ಯರ್ಥಿಗಳ ಸಂಖ್ಯೆಗಿಂತ ಒಂದು ಡಜನ್ ಹೆಚ್ಚಾಗಿದ್ದು, ಬಿಎಸ್ಪಿ ಇತಿಹಾಸದಲ್ಲಿಯೇ ಇಷ್ಟೊಂದು ಸಂಖ್ಯೆಯ ಮುಸ್ಲಿಂ ಅಭ್ಯರ್ಥಿಗಳಿಗೆ ಅವಕಾಶ ನೀಡಿದ್ದು ಇದೇ ಪ್ರಥಮವಾಗಿದೆ.

ಈ ಬಗ್ಗೆ ಮಂಗಳವಾರ ಮಾಹಿತಿ ನೀಡಿದ ಪಕ್ಷದ ಮುಖ್ಯಸ್ಥೆ ಮಾಯಾವತಿ, ಈ ಬಾರಿ ಮೇಲ್ಜಾತಿಯ 113 ಅಭ್ಯರ್ಥಿಗಳು, ಹಿಂದುಳಿದ ವರ್ಗಗಳ 106 ಅಭ್ಯರ್ಥಿಗಳು ಹಾಗೂ ದಲಿತ ಸಮುದಾಯದ 87 ಅಭ್ಯಥಿಗಳಿಗೆ ಟಿಕೆಟ್ ನೀಡಲಾಗುವುದು ಎಂದು ಹೇಳಿದರಲ್ಲದೆ ತಮ್ಮ ಪಕ್ಷ ಎಲ್ಲಾ ಜಾತಿ ಧರ್ಮಗಳಿಗೂ ಅವಕಾಶ ನೀಡುತ್ತಿದೆಯೆಂದಿದ್ದಾರೆ.

ಬಿಎಸ್ಪಿ ಈ ಬಾರಿ ಯಾವುದೇ ಇತರ ಪಕ್ಷಗಳೊಂದಿಗೆ ಚುನಾವಣಾ ಮೈತ್ರಿ ಅಥವಾ ಹೊಂದಾಣಿಕೆ ಮಾಡುವುದಿಲ್ಲ ಎಂದು ಹೇಳಿದ ಅವರು ಚುನಾವಣೆ ದಿನಾಂಕ ಘೋಷಣೆಯಾದ ನಂತರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗುವುದು ಎಂದಿದ್ದಾರೆ.
‘‘ದುರ್ಬಲ ಪಕ್ಷಗಳಿಗೆ ಮಾತ್ರ ಮೈತ್ರಿ ಸಾಧಿಸುವ ಅಗತ್ಯವಿದೆ. ನಮ್ಮ ಪಕ್ಷ ಮುಂದಿನ ಸರಕಾರವನ್ನು ಸ್ಪಷ್ಟ ಬಹುಮತದೊಂದಿಗೆ ಸ್ಥಾಪಿಸಲಿದೆ’’ ಎಂದು ಭವಿಷ್ಯ ನುಡಿದರು.

ಸಮಾಜವಾದಿ ಪಕ್ಷದ ಯಾದವ ಮತ ಬ್ಯಾಂಕ್ ಅಖಿಲೇಶ್ ಮತ್ತು ಶಿವಪಾಲ್ ಬಣಗಳ ನಡುವೆ ಹಂಚಿ ಹೋಗಿದೆ ಎಂದು ಹೇಳಿದ ಮಾಯಾವತಿ ಮುಸ್ಲಿಮರು ತಮ್ಮ ಮತಗಳನ್ನು ಸಮಾಜವಾದಿ ಪಕ್ಷ ಅಥವಾ ಕಾಂಗ್ರೆಸ್ಸಿಗೆ ನೀಡಿ ಪೋಲು ಮಾಡಬಾರದು ಎಂದರು. ‘‘ಎರಡೂ ಪಕ್ಷಗಳು ಉತ್ತರಪ್ರದೇಶದಲ್ಲಿ ಆಕ್ಸಿಜನ್ ಸಪೋರ್ಟ್ ನಲ್ಲಿದೆ ಎಂದು ಅವರು ವ್ಯಂಗ್ಯವಾಡಿದರು.

ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ ಮಾಯಾವತಿ, ಬಿಜೆಪಿ ಚುನಾವಣೆ ಗೆಲ್ಲುವುದಿಲ್ಲವೆಂದು ಅರಿತಿರುವುದರಿಂದಲೇ ಮೋದಿ ತಮ್ಮ ಭಾಷಣದಲ್ಲಿ ‘‘ಈ ಚುನಾವಣೆ ಸೋಲು ಅಥವಾ ಗೆಲುವಿನ ಬಗ್ಗೆ ಅಲ್ಲ, ಬದಲಾಗಿ ಜವಾಬ್ದಾರಿಯ ಬಗ್ಗೆ’’ ಎಂದು ಹೇಳಿದ್ದಾರೆ. ಜವಾಬ್ದಾರಿಯ ಬಗ್ಗೆ ಮಾತನಾಡುವವರು ತಾವೆಷ್ಟು ಜವಾಬ್ದಾರರು ಎಂದು ಮೊದಲು ತಿಳಿದುಕೊಳ್ಳಬೇಕು ಎಂದು ಮಾಯಾವತಿ ಪ್ರಧಾನಿಯನ್ನು ಉಲ್ಲೇಖಿಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News