×
Ad

ಐದು ರಾಜ್ಯಗಳ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಪ್ರಕಟ

Update: 2017-01-04 12:52 IST

 ಹೊಸದಿಲ್ಲಿ,ಜ.4: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಬುಧವಾರ ಘೋಷಿಸಿದೆ. ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಹಾಗೂ ಗೋವಾ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ 16 ಕೋಟಿಗೂ ಅಧಿಕ ಮತದಾರರಿದ್ದು, 690 ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

‘‘ಎಲ್ಲೆಡೆ ಮಹಿಳೆಯರಿಗೆ ಪ್ರತ್ಯೇಕ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ’’ ಎಂದು ಕೇಂದ್ರ ಚುನಾವಣಾ ಆಯುಕ್ತ ನಸೀಮ್ ಝೈದಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಗೋವಾ ಹಾಗೂ ಪಂಬಾಬ್‌ನಲ್ಲಿ ಫೆ.4 ರಂದು ಚುನಾವಣೆ ನಡೆಯಲಿದ್ದು, ಗೋವಾದ 40 ಕ್ಷೇತ್ರಗಳು ಹಾಗೂ ಪಂಜಾಬ್‌ನ 117 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಫೆ.15 ರಂದು ಉತ್ತರಾಖಂಡದ 70 ಕ್ಷೇತ್ರಗಳಿಗೆ ಒಂದೇ ಹಂತದ ಮತದಾನ ನಡೆಯಲಿದೆ.

  ಮಣಿಪುರದ 60 ಕ್ಷೇತ್ರಗಳಲ್ಲಿ ಮಾ.4 ಹಾಗೂ 8 ರಂದು 2 ಹಂತದ ಮತದಾನ ನಡೆಯಲಿದೆ. ಮಾ.4 ರಂದು 38 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ಹಾಗೂ ಮಾ.8 ರಂದು 22 ವಿಧಾನಸಭಾ ಕ್ಷೇತ್ರಗಳಲ್ಲಿ 2ನೆ ಹಂತದ ಚುನಾವಣೆ ನಡೆಯಲಿದೆ.

ದೇಶದ ಅತಿ ದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಫೆ.11, 15, 19, 23, 27, ಮಾರ್ಚ್ 4, 8 ರಂದು ಚುನಾವಣೆ ನಡೆಯಲಿದೆ. ಐದೂ ರಾಜ್ಯಗಳ ಫಲಿತಾಂಶ ಮಾ.11 ರಂದು ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ.

ಚುನಾವಣಾ ಆಯುಕ್ತರು ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆಗೆ ವೇಳಾಪಟ್ಟಿಯನ್ನು ಘೋಷಿಸಿದ್ದು, ಚುನಾವಣಾ ಆಯುಕ್ತರ ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು ಇಂತಿವೆ.

1:ಎಲ್ಲ ಐದು ರಾಜ್ಯಗಳ ಮತ ಎಣಿಕೆ ಮಾ.11 ರಂದು ನಡೆಯಲಿದೆ.

2: ಉತ್ತರಪ್ರದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಮೊದಲ ಹಂತ: ಫೆ.11

ಎರಡನೆ ಹಂತ: ಫೆ.15

 ಮೂರನೆ ಹಂತ: ಫೆ.19

ನಾಲ್ಕನೆ ಹಂತ: ಫೆ.23

ಐದನೆ ಹಂತ: ಫೆ.27

ಆರನೆ ಹಂತ: ಮಾ.4

ಏಳನೆ ಹಂತ: ಮಾ.8

3: ಮಣಿಪುರದಲ್ಲಿ ಎರಡು ಹಂತದ ಚುನಾವಣೆ ನಡೆಯಲಿದೆ.

ಮೊದಲ ಹಂತ: ಮಾ.4

ಎರಡನೆ ಹಂತ: ಮಾ.8:

4: ಉತ್ತರಾಖಂಡದಲ್ಲಿ ಫೆ.15 ರಂದು ಒಂದೇ ಹಂತದಲ್ಲಿ ಮತದಾನ

5: ಪಂಜಾಬ್ ಹಾಗೂ ಗೋವಾದಲ್ಲಿ ಫೆ.4 ರಂದು ಒಂದೇ ಹಂತದ ಮತದಾನ

6: ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಚುನಾವಣೆ ಆಯೋಗಕ್ಕೆ ಪೇಯ್ಡೆ ನ್ಯೂಸ್ ಪತ್ತೆ ಹಚ್ಚಲು ನೆರವಾಗಬೇಕು.

7: ರಾಜಕೀಯ ಪಕ್ಷಗಳ ಮಾಲಿಕತ್ವದ ಟಿವಿ ಚಾನಲ್‌ಗಳು ತಮ್ಮ ಅಭ್ಯರ್ಥಿಯ ಪರ ಪ್ರಚಾರ ನಡೆಸುತ್ತಿರುವ ಬಗ್ಗೆ ಹಾಗೂ ಅಭ್ಯರ್ಥಿಯ ಖರ್ಚು-ವೆಚ್ಚದ ಬಗ್ಗೆ ಚುನಾವಣಾ ಆಯೋಗ ನಿಗಾ ಇಡಲಿದೆ.

8: ಪ್ರತಿ ಅಭ್ಯರ್ಥಿಯ ಖರ್ಚು-ವೆಚ್ಚಕ್ಕೆ ಮಿತಿ ಹೇರಲಾಗಿದ್ದು, ಉತ್ತರಪ್ರದೇಶ, ಪಂಜಾಬ್ ಹಾಗೂ ಉತ್ತರಾಖಂಡದಲ್ಲಿ 28 ಲಕ್ಷ ರೂ., ಮಣಿಪುರ ಹಾಗೂ ಗೋವಾಕ್ಕೆ 20 ಲಕ್ಷ ರೂ. ಮಿತಿ ಹೇರಲಾಗಿದೆ.

9: ಚುನಾವಣೆ ನೀತಿ ಸಂಹಿತೆ ಇಂದಿನಿಂದಲೆ ಜಾರಿ.

10: ಕಪ್ಪು ಹಣದ ಬಳಕೆ ಹತ್ತಿಕ್ಕಲು ಖರ್ಚು-ವೆಚ್ಚದ ಕಟ್ಟುನಿಟ್ಟಿನ ನಿಗಾ.

11: ಎಲ್ಲ ರಾಜ್ಯಗಳಿಗೆ ಮಹಿಳೆಯರಿಗೆ ಪ್ರತ್ಯೇಕ ಮತಗಟ್ಟೆ

 12: ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆಯಲ್ಲಿ 1.85 ಲಕ್ಷ ಮತಗಟ್ಟೆ ಸ್ಥಾಪನೆ

13: ಪ್ರತಿಯೊಂದು ಮತಗಟ್ಟೆಯಲ್ಲಿ ಮತದಾನದ ಪ್ರಕ್ರಿಯೆ ಬಗ್ಗೆ ಹಾಗೂ ಏನು ಮಾಡಬೇಕು, ಮಾಡಬಾರದು ಎಂಬ ಬಗ್ಗೆ 4 ಪೋಸ್ಟರ್ ಅಳವಡಿಸಬೇಕು.

14: ಪ್ರತಿ ಕುಟುಂಬಕ್ಕೆ ಬಣ್ಣ ಬಣ್ಣದ ಮತದಾನ ಮಾರ್ಗದರ್ಶಿ ವಿತರಣೆ

15: ಸುಮಾರು 16 ಕೋಟಿ ಮತದಾರರು ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ.

16: ಚುನಾವಣಾ ಆಯೋಗ ಫೋಟೊ ಸಹಿತ ಮತದಾರರ ಪಟ್ಟಿಯನ್ನು ಪರಿಚಯಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News