×
Ad

ದೇಶದ ನೂತನ ಮುಖ್ಯ ನ್ಯಾಯಾಧೀಶರ ಈ ದಾಖಲೆ 40 ವರ್ಷಗಳಿಂದ ಅಬಾಧಿತ !

Update: 2017-01-04 14:28 IST

ಹೊಸದಿಲ್ಲಿ,ಜ.4 : ಸುಪ್ರೀಂ ಕೋರ್ಟಿನ 44ನೇಮುಖ್ಯ ನ್ಯಾಯಮೂರ್ತಿಗಳಾಗಿ ಜಸ್ಟಿಸ್ ಜೆ ಎಸ್ ಖೇಹರ್ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣವ್ ಮಖರ್ಜಿಯವರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಜಸ್ಟಿಸ್ ಖೇಹರ್ ಅವರು ಅಪರೂಪದ ವ್ಯಕ್ತಿತ್ವ. ಅವರ ಮಾನವೀಯ ಅಂತಃಕರಣ ಎಲ್ಲರಿಗೂ ಮಾದರಿ. ಪ್ರತಿ ಮೂರು ತಿಂಗಳಿಗೊಮ್ಮೆ ಅವರು ದಿಲ್ಲಿಯ ಆಲ್ ಇಂಡಿಯಾ ಇನಸ್ಟಿಟ್ಯೂಟ್ ಆಫ್ ಮೆಡಿಕ್ ಸಾಯನ್ಸಸ್ ಇಲ್ಲಿಗೆ ಹೋಗಿ ರಕ್ತ ದಾನ ಮಾಡುತ್ತಾರೆ. ಅವರು ಕಳೆದ ನಾಲ್ಕು ದಶಕಗಳಿಗಿಂತಲೂ ಹೆಚ್ಚಿನ ಸಮಯದಿಂದ ರಕ್ತದಾನ ಮಾಡುತ್ತಿದ್ದು, ಸೆಪ್ಟಂಬರ್ 2011ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಂದಿನಿಂದ ಅವರು ದೆಹಲಿಯಲ್ಲಿ ರಕ್ತದಾನ ಮಾಡುತ್ತಾ ಬಂದಿದ್ದಾರೆ.

ರಕ್ತದಾನ ಮಾಡಿದ ಕೆಲವೇ ನಿಮಿಷಗಳಲ್ಲಿ ಮತ್ತೆ ಕರ್ತವ್ಯಕ್ಕೆ ಅವರು ಹೇಗೆ ಹಾಜರಾಗುತ್ತಿದ್ದರೆಂಬುದನ್ನು ಅವರ ಅನೇಕ ಸಹೋದ್ಯೋಗಿಗಳು ನೆನಪಿಸುತ್ತಾರೆ.

ಆದರೆ ಅವರು ರಕ್ತದಾನ ಮಾಡುತ್ತಿರುವ ವಿಚಾರ ಅವರ ಸ್ನೇಹಿತರಿಗೆ ಮತ್ತು ಸಹೋದ್ಯೋಗಿಗಳನ್ನು ಹೊರತುಪಡಿಸಿ ಹೆಚ್ಚಿನವರಿಗೆ ಇತ್ತೀಚಿಗಿನವರೆಗೂ ತಿಳಿದಿರಲಿಲ್ಲ. ಅತ್ಯಂತ ಹೆಚ್ಚು ಸುದ್ದಿ ಮಾಡುವಂತಹ ತೀರ್ಪು ನೀಡುವ ಇತಿಹಾಸವಿರುವ ಖೇಹರ್ ಹಾಗೂ ಅವರ ಪತ್ನಿ ಮಧುರ್ ಪ್ರೀತ್ ಕೌರ್ ಪ್ರಚಾರದಿಂದ ಹೆಚ್ಚಾಗಿ ದೂರವೇ ಉಳಿಯಬಯಸುವವರು.

ಕೆನ್ಯಾದಲ್ಲಿದ್ದ ಅವರ ಕುಟುಂಬ ಭಾರತಕ್ಕೆ ಬಂದಾಗ ಖೇಹರ್ ಅವರು ಇನ್ನೂ ಶಾಲೆಯಲ್ಲಿ ಓದುತ್ತಿದ್ದರು. ಪಂಜಾಬ್ ವಿಶ್ವವಿದ್ಯಾಲಯದ ಚಿನ್ನದ ಪದಕ ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಜಸ್ಟಿಸ್ ಖೇಹರ್ ಅವರು ಪ್ರಥಮ ಬಾರಿ ಸುದ್ದಿಯಾಗಿದ್ದು ದಶಕಗಳ ಹಿಂದೆ.ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಜಸ್ಟಿಸ್ ವಿ ರಾಮಸ್ವಾಮಿ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದರೂ ರಾಮಸ್ವಾಮಿಯವರನ್ನು ಬಲವಾಗಿ ಬೆಂಬಲಿಸಿದ್ದರು ಜಸ್ಟಿಸ್ ಖೇಹರ್.

ಜಸ್ಟಿಸ್ ದಿನಕರನ್ ಅವರ ವಿರುದ್ಧದ ಭ್ರಷ್ಟಾಚಾರ ಆರೋಪದ ತನಿಖೆಗೆ ಉಪರಾಷ್ಟ್ರಪತಿ ರಚಿಸಿದ್ದ ಮೂವರು ನ್ಯಾಯಾಧೀಶರುಗಳ ಸಮಿತಿಯಲ್ಲಿಯೂ ಜಸ್ಟಿಸ್ ಖೇಹರ್ ಇದ್ದರು.ಆದರೆ ವಿಚಾರಣೆ ಮುಗಿಯುವ ಮುನ್ನವೇ ಜಸ್ಟಿಸ್ ದಿನಕರನ್ ಅವರು ರಾಜೀನಾಮೆ ನೀಡಿದ್ದರು.

ಕರ್ನಾಟಕ ಹೈಕೊರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಅವರು ಮಹಿಳಾ ನ್ಯಾಯಾಧೀಶೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತ ನ್ಯಾಯಾಧೀಶರೊಬ್ಬರನ್ನು ತರಾಟೆಗೆ ತೆಗೆದುಕೊಂಡು ಅವರು ರಾಜೀನಾಮೆ ನೀಡುವಂತೆ ಮಾಡಿದ್ದರು.

ತಮ್ಮ ಹೆತ್ತವರ ಮೇಲೆ ಅಪಾರ ಪ್ರೀತಿ ಹೊಂದಿರುವ ಖೇಹರ್ ಕೆಲ ವರ್ಷಗಳ ಹಿಂದೆ ಅವರ ತಂದೆ ತೀರಿಕೊಂಡ ಮರುದಿನವೇ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಕರ್ತವ್ಯಪರತೆ ಮೆರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News