ಕ್ಷೀರ ಪಥದಲ್ಲಿ ‘ನಕ್ಷತ್ರ ಉತ್ಪಾದನೆ ಕಾರ್ಖಾನೆ’ ಪತ್ತೆ
Update: 2017-01-04 22:23 IST
ಪ್ಯಾರಿಸ್, ಜ. 4: ಕ್ಷೀರ ಪಥದ ಓರಿಯನ್ ನೆಬ್ಯುಲದಲ್ಲಿ ಮರಿ ನಕ್ಷತ್ರಗಳು ಆಕಾರ ಪಡೆದುಕೊಳ್ಳುತ್ತಿರುವ ಆಕರ್ಷಕ ಚಿತ್ರಗಳನ್ನು ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಬುಧವಾರ ಬಿಡುಗಡೆಗೊಳಿಸಿದೆ.
ಬೃಹತ್ ಓರಿಯನ್ ಎ ಬೆಳಕಿನ ಮೋಡ (ನೆಬ್ಯುಲ)ವು ಭೂಮಿಯ ಅತ್ಯಂತ ಸಮೀಪದ ‘ನಕ್ಷತ್ರ ಕಾರ್ಖಾನೆ’ಯಾಗಿದೆ. ಆಕಾಶಕಾಯಗಳು ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ವೀಕ್ಷಿಸಲು ಖಗೋಳ ವಿಜ್ಞಾನಿಗಳಿಗೆ ಇದು ಒಳ್ಳೆಯ ಅವಕಾಶ ಒದಗಿಸಿದೆ.
ಓರಿಯನ್ ನೆಬ್ಯುಲವು ಭೂಮಿಯಿಂದ 1350 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ ಹಾಗೂ ಅದರ ದ್ರವ್ಯರಾಶಿ ಸೂರ್ಯನಿಗಿಂತ 2,000 ಪಟ್ಟು ಅಧಿಕವಾಗಿದೆ.ತೀಕ್ಷ್ಣ ಬೆಳಕಿನಿಂದಾಗಿ ತೀರಾ ಸಣ್ಣ ತಾರೆಗಳನ್ನು ಕಾಣಲು ಸಾಧ್ಯವಾಗಿಲ್ಲ.
ಈಗಾಗಲೇ ಚಿಲಿಯಲ್ಲಿರುವ ‘ವಿಸ್ಟ’ ಟೆಲಿಸ್ಕೋಪ್ ಮೂಲಕ ಸುಮಾರು 8 ಲಕ್ಷ ನೂತನ ತಾರೆಗಳು, ಎಳೆಯ ‘ಆಕಾಶ ಕಾಯಗಳು’ ಮತ್ತು ದೂರದ ಆಕಾಶಗಂಗೆ (ಗೆಲಾಕ್ಸಿ)ಗಳನ್ನು ವೀಕ್ಷಿಸಲಾಗಿದೆ.
ನೆಬ್ಯುಲ ಎನ್ನುವುದು ಅನಿಲ ಮತ್ತು ಧೂಳಿನ ಬೃಹತ್ ಮೋಡವಾಗಿದೆ.