×
Ad

ಸಂಗೀತ ಮಾಂತ್ರಿಕನಿಗೆ 50: ದಿಲೀಪ್ ಕುಮಾರ್, ಎ.ಆರ್.ರಹ್ಮಾನ್ ಆಗಿದ್ದು ಏಕೆ? ಹೇಗೆ?

Update: 2017-01-06 11:32 IST

ಚೆನ್ನೈ, ಜ.6: ಎ.ಆರ್.ರಹ್ಮಾನ್- ಭಾರತದ ಸಂಗೀತ ಲೋಕ ಕಂಡ ಒಂದು ಮಹಾನ್ ಪ್ರತಿಭೆ. ಅವರನ್ನು ಸಂಗೀತ ಲೋಕದ ಮಾಂತ್ರಿಕನೆಂದೂ ವರ್ಣಿಸುತ್ತಾರೆ. ಈ ಅಪೂರ್ವ ಕಲಾವಿದನಿಗೆ 50 ವರ್ಷಗಳು ತುಂಬಿವೆ. ಅಂದ ಹಾಗೆ ಈ ಎ.ಆರ್.ರಹ್ಮಾನ್(ಅಲ್ಲಾಹ್ರಖಾ ಖಾನ್) ಹಿಂದೆ ಎ.ಎಸ್.ದಿಲೀಪ್ ಕುಮಾರ್ ಆಗಿದ್ದರು. ಅವರು ಎ.ಆರ್.ರಹ್ಮಾನ್ ಆಗಿದ್ದು ಏಕೆ ? ಹೇಗೆ ? ಎಂಬುದು ಒಂದು ಕುತೂಹಲಕಾರಿ ಕಥೆ. ಇದನ್ನು ಸ್ವತಹ ಎ.ಆರ್.ರಹ್ಮಾನ್ ಅವರು ಬರೆದಿರುವ ಓಂ ಬುಕ್ಸ್ ಇಂಟರ್ ನ್ಯಾಷನಲ್ ಪ್ರಕಟಿಸಿರುವ ಅವರ ಕೃತಿ ‘ಎ.ಆರ್.ರಹ್ಮಾನ್ ದಿ ಸ್ಪಿರಿಟ್ ಆಫ್ ಮ್ಯೂಸಿಕ್’ ನಲ್ಲಿ ವಿವರಿಸಿದ್ದಾರೆ.

ರಹ್ಮಾನ್ ಅವರ ತಾಯಿ ಹಿಂದೂ ಪದ್ಧತಿಗಳನ್ನು ಪಾಲಿಸುವವರಾಗಿದ್ದರಲ್ಲದೆ, ಆಧ್ಯಾತ್ಮಿಕತೆಯಲ್ಲೂ ಒಲವು ಹೊಂದಿದವರಾಗಿದ್ದರು. ಅವರ ಹಬೀಬುಲ್ಲಾ ರಸ್ತೆಯ ಮನೆಯ ಗೋಡೆಗಳಲ್ಲಿ ಹಿಂದೂ ದೇವರ ಚಿತ್ರಗಳಿದ್ದವು. ಮೇರಿ ಮಾತೆ ಏಸುವನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡಿರುವ ಚಿತ್ರವೂ ಅಲ್ಲಿತ್ತಲ್ಲದೆ ಇಸ್ಲಾಂನ ಪವಿತ್ರ ಕ್ಷೇತ್ರಗಳಾದ ಮಕ್ಕಾ, ಮದೀನಾದ ಪಟವೂ ಇತ್ತು.

ಅವರು ಚಿಕ್ಕವರಿರುವಾಗಲೇ ಅವರ ತಂದೆ ತೀರಿಕೊಂಡಾಗ ಆ ಕುಟುಂಬಕ್ಕೆ ಆರ್ಥಿಕ ಸಂಕಷ್ಟಗಳು ತಲೆದೋರಿದ್ದವು. ನಾಲ್ಕು ಮಕ್ಕಳಿದ್ದ ಆ ಕುಟುಂಬವನ್ನು ಸಲಹುವುದು ಅವರ ತಾಯಿಗೆ ಬಹಳ ಕಷ್ಟಕರವಾಗಿತ್ತು. ಆಗ ಅವರು ಸೂಫಿ ಸಂತ ಕರೀಮುಲ್ಲಾ ಶಾಹ್ ಖಾದ್ರಿ ಅವರನ್ನು ಭೇಟಿಯಾಗಿದ್ದರಲ್ಲದೆ, ಅವರ ಆಶೀರ್ವಾದ ಹಾಗೂ ಅವರು ನೀಡಿದ ಧೈರ್ಯದಿಂದ ಸಾಕಷ್ಟು ನೆಮ್ಮದಿ ಪಡೆದಿದ್ದರು. ರಹ್ಮಾನ್ ಅವರ ತಂದೆ ತೀರಿ ಹತ್ತು ವರ್ಷಗಳಾದ ನಂತರ 1986ರಲ್ಲಿ ಮತ್ತೆ ಆ ಸಂತರನ್ನು ಅವರ ತಾಯಿ ಭೇಟಿಯಾಗಿದ್ದರು. ಆಗ ಅನಾರೋಗ್ಯದಿಂದ ಇದ್ದ ಅವರನ್ನು ರಹ್ಮಾನ್ ಅವರ ತಾಯಿ ಉಪಚರಿಸಿದ್ದರು. ಸಂತ ಕರೀಮುಲ್ಲಾ ಕೂಡ ರಹ್ಮಾನ್ ತಾಯಿಯನ್ನು ತಮ್ಮ ಸ್ವಂತ ಮಗಳೆಂದೇ ತಿಳಿದಿದ್ದರು. ಆಗ ದಿಲೀಪ್ ಕುಮಾರ್ ಗೆ 19ರ ವಯಸ್ಸು. ಆಗ ಅವರು ಸಂಗೀತಗಾರನಾಗಿ ಜಿಂಗಲ್ಸ್ ಸಂಯೋಜಿಸುತ್ತಿದ್ದರು. 1987ರಲ್ಲಿ ಅವರ ಕುಟುಂಬ ಕೊಡಂಬಕ್ಕಂಗೆ ಸ್ಥಳಾಂತರಗೊಂಡಿತು. ಅಲ್ಲಿಗೆ ಹೋದ ನಂತರ ಸೂಫಿ ಪಂಥ ತಮ್ಮನ್ನು ಹಾಗೂ ತಮ್ಮ ತಾಯಿಯನ್ನು ಮೇಲೆತ್ತಲು ಸಹಾಯ ಮಾಡಿತು ಎಂಬುದನ್ನು ಅರಿತು ಅವರು ಸೂಫಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು.

ಆಗ ಅವರ ಕುಟುಂಬ ಸ್ವತಂತ್ರವಾಗಿದ್ದು, ಯಾರ ಮೇಲೂ ಅವಲಂಬಿತವಾಗಿಲ್ಲದೇ ಇದ್ದುದರಿಂದ, ಮೇಲಾಗಿ ಅವರು ಸಂಗೀತಗಾರರಾಗಿದ್ದುದರಿಂದ ಯಾರು ಕೂಡ ಅವರ ಮತಾಂತರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.

‘‘ನಿಜ ಹೇಳಬೇಕೆಂದರೆ ನನಗೆ ನನ್ನ ಆಗಿನ ಹೆಸರೇ ಇಷ್ಟವಾಗಿರಲಿಲ್ಲ. ಹಿರಿಯ ನಟ ದಿಲೀಪ್ ಕುಮಾರ್ ಅವರಿಗೆ ನಾನು ಅವಮಾನ ಮಾಡುತ್ತಿಲ್ಲ. ಆದರೆ ಅದೇಕೋ ನನ್ನ ಇಮೇಜ್ ಗೂ ಆ ಹೆಸರು ಹೊಂದಿ ಬರುತ್ತಿರಲಿಲ್ಲ’’ ಎಂದು ರಹ್ಮಾನ್ ಹೇಳುತ್ತಾರೆ.

ಒಮ್ಮೆ ಅವರ ಸಹೋದರಿಗೆ ವೈವಾಹಿಕ ಸಂಬಂಧಕ್ಕಾಗಿ ಅವರ ಜಾತಕವನ್ನು ಜ್ಯೋತಿಷಿಗಳೊಬ್ಬರಿಗೆ ತೋರಿಸಲು ಹೋದ ಸಮಯದಲ್ಲಿ ದಿಲೀಪ್ ಕುಮಾರ್ ಗೆತನ್ನ ಹೆಸರನ್ನು ಬದಲಾಯಿಸಬೇಕೆಂಬ ತುಡಿತವಿತ್ತು. ಆ ಜ್ಯೋತಿಷಿ ಅವರತ್ತ ನೋಡಿ ‘‘ಈ ಹುಡುಗ ಆಸಕ್ತಿದಾಯಕ ವ್ಯಕ್ತಿ’’ ಎಂದಿದ್ದರು.

ಅವರು ‘ಅಬ್ದುಲ್ ರಹ್ಮಾನ್’ ಹಾಗೂ ‘ಅಬ್ದುಲ್ ರಹೀಂ’ ಹೆಸರುಗಳನ್ನು ಸೂಚಿಸಿದರು. ಆದರೆ ಆಗಿನ ದಿಲೀಪ್ ಕುಮಾರ್ ಗೆ ಅದು ಇಷ್ಟವಾಗಿರಲಿಲ್ಲ. ಆದರೆ ‘ರಹ್ಮಾನ್’ ಎನ್ನುವುದು ಇಷ್ಟವಾಗಿತ್ತು. ‘‘ಹಿಂದೂ ಜ್ಯೋತಿಷಿಯೊಬ್ಬರು ನನಗೆ ಹೆಸರು ಸೂಚಿಸಿದವರು’’ ಎಂದು ರಹ್ಮಾನ್ ನೆನಪಿಸಿಕೊಳ್ಳುತ್ತಾರೆ.
 ಕೊನೆಗೆ ಅವರ ತಾಯಿಯ ಇಚ್ಛೆಯಂತೆ ‘ಅಲ್ಲಾಹ್ ರಖಾ’ ಸೇರಿಸಿ ಅವರು ಎ.ಆರ್.ರಹ್ಮಾನ್ ಆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News