×
Ad

ನಾಸ್ತಿಕರು ಪ್ರಮಾಣ ಸ್ವೀಕರಿಸಲು ಪ್ರತ್ಯೇಕ ಆಯ್ಕೆ ಕೋರಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

Update: 2017-01-06 19:27 IST

ಮುಂಬೈ,ಜ.6: ನಾಸ್ತಿಕರಿಗಾಗಿ ಭಾರತದ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುವ ಆಯ್ಕೆಯನ್ನು ಪ್ರಮಾಣಗಳ ಕಾಯ್ದೆಯಲ್ಲಿ ಸೇರಿಸುವಂತೆ ಕೇಂದ್ರ ಕಾನೂನು ಸಚಿವಾಲಯ ಮತ್ತು ಇತರ ಪ್ರಾಧಿಕಾರಗಳಿಗೆ ನಿರ್ದೇಶ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಂಬೈ ಉಚ್ಚ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ.

1969ರ ಪ್ರಮಾಣಗಳ ಕಾಯ್ದೆಯಂತೆ ವ್ಯಕ್ತಿಯೋರ್ವ ನ್ಯಾಯಾಲಯದಲ್ಲಿ ಹೇಳಿಕೆ ನೀಡುವಾಗ ಅಥವಾ ಅಫಿದಾವತ್ ಅಥವಾ ಯಾವುದೇ ಇತರ ಅರ್ಜಿಯನ್ನು ಸಲ್ಲಿಸುವಾಗ ದೇವರ ಹೆಸರಿನಲ್ಲಿ ಅಥವಾ ಸತ್ಯನಿಷ್ಠೆಯ ಹೆಸರಿನಲ್ಲಿ ಪ್ರಮಾಣವನ್ನು ಮಾಡಬಹುದಾಗಿದೆ.

ಭಾರತೀಯ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಲು ಸಾಧ್ಯವಾಗುವಂತೆ ಮೂರನೇ ಆಯ್ಕೆಯನ್ನು ಕಾಯ್ದೆಯಲ್ಲಿ ಸೇರಿಸುವಂತೆ ಕೋರಿ ಮುಂಬೈ ನಿವಾಸಿ ಸುನಿಲ್ ಮಾನೆ ಸಲ್ಲಿಸಿದ್ದ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಮುಖ್ಯನ್ಯಾಯಾಧೀಶೆ ಮಂಜುಳಾ ಚೆಲ್ಲೂರ ಅವರ ವಿಭಾಗೀಯ ಪೀಠವು, ಸಂವಿಧಾನದ ಹೆಸರಿನಲ್ಲಿ ಪ್ರಮಾಣವನ್ನು ಸ್ವೀಕರಿಸಲು ಅನುಮತಿಯನ್ನು ಕಾನೂನು ರೂಪಕರು ನಿರ್ಧರಿಸಬೇಕೇ ಹೊರತು, ಇಂತಹ ನಿರ್ದೇಶವನ್ನು ನ್ಯಾಯಾಲಯವು ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಿತು.

ತಾವು ನಾಸ್ತಿಕರಾಗಿರುವುದರಿಂದ ದೇವರ ಹೆಸರಿನಲ್ಲಿ ಅಥವಾ ಭಗವದ್ಗೀತೆಯ ಮೇಲೆ ಕೈ ಇರಿಸಿ ಪ್ರಮಾಣ ಸ್ವೀಕರಿಸಲು ನಿರಾಕರಿಸಿದ್ದ ಇಬ್ಬರು ವ್ಯಕ್ತಿಗಳಿಗೆ ಸಾಕ್ಷ ನುಡಿಯಲು ಕೆಳ ನ್ಯಾಯಾಲಯಗಳು ಅನುಮತಿಯನ್ನು ನಿರಾಕರಿಸಿದ ಎರಡು ಪ್ರತ್ಯೇಕ ಘಟನೆಗಳನ್ನು ಮಾನೆ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News