ಬಂಧಿತ ಪಾಕ್ ಭಯೋತ್ಪಾದಕನ ವಿರುದ್ಧ ಚಾರ್ಜ್‌ಷೀಟ್ ದಾಖಲು

Update: 2017-01-06 14:09 GMT

ಹೊಸದಿಲ್ಲಿ, ಜ.6: ಕಳೆದ ಜುಲೈಯಲ್ಲಿ ಕಾಶ್ಮೀರದಲ್ಲಿ ಸೆರೆ ಸಿಕ್ಕ ಪಾಕಿಸ್ತಾನದ ಪ್ರಜೆ ಬಹಾದುರ್ ಅಲಿ ಎಂಬಾತನ ವಿರುದ್ಧ ರಾಷ್ಟ್ರೀಯ ತನಿಖಾ ಸಮಿತಿ(ಎನ್‌ಐಎ) ಚಾರ್ಜ್‌ಷೀಟ್ ದಾಖಲಿಸಿದೆ. ಈತ ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಯಿಬದ (ಎಲ್‌ಇಟಿ) ಪರ ಕೆಲಸ ಮಾಡುತ್ತಿದ್ದು ದಿಲ್ಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ದಾಳಿ ನಡೆಸಲು ಸಂಚು ಹೂಡಿದ್ದ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆ ಪಾಕ್ ಮೂಲದ ಎಲ್‌ಇಟಿ ಹೆಣೆದ ಸಂಚಿನ ಒಂದು ಭಾಗವಾಗಿತ್ತು ಎಂದು ಜಿಲ್ಲಾ ನ್ಯಾಯಾಧೀಶ ಅಮರ್‌ನಾಥ್ ಅವರಿಗೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ದೂರಲಾಗಿದೆ.

  ಕಳೆದ ಬೇಸಿಗೆಯಿಂದ , ನಿಷೇಧಿತ ಸಂಘಟನೆ ಎಲ್‌ಇಟಿ ಗಡಿಭಾಗದಲ್ಲಿ ನಿಯೋಜನೆಗೊಂಡಿರುವ ಪಾಕ್ ಪಡೆಗಳ ನೆರವಿನಿಂದ ಭಾರೀ ಸಂಖ್ಯೆಯಲ್ಲಿ ಸಶಸ್ತ್ರ ಭಯೋತ್ಪಾದಕರನ್ನು ಭಾರತದೊಳಗೆ ನುಸುಳಿಸುವಲ್ಲಿ ಸಫಲವಾಗಿತ್ತು. ಸ್ಥಳೀಯ ಜನರೊಂದಿಗೆ ಬೆರೆತು , ಗಲಭೆಗೆ ಪ್ರೇರಣೆ ನೀಡುವುದು ಮತ್ತು ಪೊಲೀಸರ ಹಾಗೂ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವುದು ಇವರಿಗೆ ನೀಡಿದ್ದ ಜವಾಬ್ದಾರಿಯಾಗಿತ್ತು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಬಹಾದ್ದುರ್ ಅಲಿ ತನ್ನ ಸಹಚರರ ನೆರವಿನಿಂದ ಭಯೋತ್ಪಾದಕ ದಾಳಿ ಸಂಘಟಿಸಿ ಭಾರತದ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವ ಸಂಚು ಹೂಡಿದ್ದ ಎಂದೂ ತಿಳಿಸಲಾಗಿದೆ. ಇವರನ್ನು ಬಂಧಿಸಿ ತಪಾಸಣೆ ನಡೆಸಿದಾಗ ದೊರೆತ ಪಾಕೆಟ್‌ಡೈರಿಯಲ್ಲಿ ಜಮ್ಮು ಕಾಶ್ಮೀರದ ಹಲವು ನಗರಗಳ ಜೊತೆಗೆ ದಿಲ್ಲಿಯ ಹೆಸರೂ ಸೇರಿತ್ತು. ಎಲ್‌ಇಟಿಯ ಸಶಸ್ತ್ರ ಸದಸ್ಯನಾಗಿರುವ ಅಲಿಯ ಬಳಿ ಈ ಡೈರಿ ಪತ್ತೆಯಾಗಿರುವುದು ಮತ್ತು ಅದರಲ್ಲಿ ದೇಶದ ಪ್ರಮುಖ ನಗರಗಳ ಹೆಸರಿರುವುದು ಈತ ದೇಶದ ಪ್ರಮುಖ ನಗರಗಳ ಮೇಲೆ ದಾಳಿ ನಡೆಸುವ ಉದ್ದೇಶ ಹೊಂದಿದ್ದ ಎಂಬುದರ ದ್ಯೋತಕವಾಗಿದೆ ಎಂದೂ ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

 ಪಾಕಿಸ್ತಾನದ ಲಾಹೋರ್‌ನ ಜಹಾಮಾ ಗ್ರಾಮದವನಾದ ಅಲಿ, ಉತ್ತರ ಕಾಶ್ಮೀರದ ಹಂದ್ವಾರಾ ಗ್ರಾಮದಲ್ಲಿ ಜುಲೈ 25ರಂದು ಭದ್ರತಾ ಪಡೆಗಳಿಗೆ ಸೆರೆಸಿಕ್ಕಿದ್ದ. ಮೂರು ಎಕೆ-47 ರೈಫಲ್, ಎರಡು ಪಿಸ್ತೂಲ್ ಮತ್ತು 23 ಸಾವಿರ ರೂ. ಮೊತ್ತದ ಭಾರತದ ಕರೆನ್ಸಿಯನ್ನು ಈತನಿಂದ ವಶಪಡಿಸಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News