ಸೌಮ್ಯಾ ಕೊಲೆ ಪ್ರಕರಣದ ತೀರ್ಪಿನ ಟೀಕೆ : ನ್ಯಾ.ಕಾಟ್ಜುರಿಂದ ಸುಪ್ರೀಂ ಕೋರ್ಟಿನಲ್ಲಿ ಕ್ಷಮೆಯಾಚನೆ

Update: 2017-01-06 14:11 GMT

ಹೊಸದಿಲ್ಲಿ,ಜ.6: ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಅವರು ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಬೇಷರತ್ ಕ್ಷಮೆಯನ್ನು ಯಾಚಿಸುವ ಮೂಲಕ ತನ್ನ ಬ್ಲಾಗ್ ಬರಹ ಕುರಿತಂತೆ ನ್ಯಾಯಾಂಗ ನಿಂದನೆ ಪ್ರಕರಣದಿಂದ ಪಾರಾಗಿದ್ದಾರೆ. 2011ರಲ್ಲಿ ಕೇರಳದಲ್ಲಿ ನಡೆದಿದ್ದ ಸೌಮ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಅವರು ತನ್ನ ಬ್ಲಾಗ್‌ನಲ್ಲಿ ಕಟುವಾಗಿ ಟೀಕಿಸಿದ್ದರು. ನ್ಯಾ.ಕಾಟ್ಜು ಕ್ಷಮಾಯಾಚನೆಯನ್ನು ಒಪ್ಪಿಕೊಂಡ ಸರ್ವೋಚ್ಚ ನ್ಯಾಯಾಲಯವು ಪ್ರಕರಣಕ್ಕೆ ಮಂಗಳ ಹಾಡಿತು.

ಸೌಮ್ಯಾ ಪ್ರಕರಣದಲ್ಲಿ ಅಪರಾಧಿಯ ಶಿಕ್ಷೆಯ ಪ್ರಮಾಣವನ್ನು ತಗ್ಗಿಸುವ ಮೂಲಕ ಸವೋಚ್ಚ ನ್ಯಾಯಾಲಯವು ಗಂಭೀರ ಕಾನೂನು ತಪ್ಪನ್ನೆಸಗಿದೆ ಎಂದು ನೇರನುಡಿಯ ಕಾಟ್ಜು ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಟೀಕಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ವೋಚ್ಚ ನ್ಯಾಯಾಲಯವು ಅವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಚಾಲನೆ ನೀಡಿತ್ತು.

ವಿಚಾರಣೆಯೊಂದರ ಸಂದರ್ಭ ನ್ಯಾ.ಕಾಟ್ಜು ಅವರು ‘ನಾನು ಯಾವುದನ್ನೂ ಲೆಕ್ಕಿಸುವುದಿಲ್ಲ ’ ಎಂದು ಘೋಷಿಸಿದ್ದರು. ಆಗ ನ್ಯಾಯಾಧಿಶರು ಅವರನ್ನು ಹೊರಗೆ ಕರೆದೊಯ್ಯುವಂತೆ ಸಿಬ್ಬಂದಿಗಳಿಗೆ ಆದೇಶಿಸಿದ್ದರು.

ನ್ಯಾಯಾಂಗದ ಕಲಾಪಗಳನ್ನು ಮತ್ತು ನ್ಯಾಯಾಂಗವನ್ನು ತಾನು ಗೌರವವಿಸುವುದಾಗಿ ಕಾಟ್ಜು ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿದಾವತ್‌ನಲ್ಲಿ ಹೇಳಿದ್ದಾರೆ.

ಕೊಚ್ಚಿಯ ಶಾಪಿಂಗ್ ಮಾಲ್‌ವೊಂದರ ಉದ್ಯೋಗಿಯಾಗಿದ್ದ ಸೌಮ್ಯಾ(23) 2011,ಫೆ.1ರಂದು ಎರ್ನಾಕುಲಂ-ಶೋರನೂರ್ ಪ್ಯಾಸೆಂಜರ್ ರೈಲಿನ ಮಹಿಳೆಯರ ಬೋಗಿಯಲ್ಲಿ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದಾಗ ಗೋವಿಂದಚಾಮಿ ಆಕೆಯ ಮೇಲೆ ಹಲ್ಲೆ ನಡೆಸಿ ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ತಳ್ಳಿದ್ದ. ಬಳಿಕ ತಾನೂ ಹೊರಕ್ಕೆ ಹಾರಿ ಕಲ್ಲಿನಿಂದ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಐದು ದಿನಗಳ ಬಳಿಕ ಸೌಮ್ಯಾ ಆಸ್ಪತೆಯಲ್ಲಿ ನಿಧನಳಾಗಿದ್ದಳು.

ವಿಚಾರಣಾ ನ್ಯಾಯಾಲಯ ಗೋವಿಂದಚಾಮಿಗೆ ಮರಣದಂಡನೆಯನ್ನು ವಿಧಿಸಿತ್ತು ಮತ್ತು 2013ರಲ್ಲಿ ರಾಜ್ಯ ಉಚ್ಚ ನ್ಯಾಯಾಲಯವು ಅದನ್ನು ದೃಢಪಡಿಸಿತ್ತು.

 ಸೌಮ್ಯಾಳ ಸಾವಿಗೆ ಗೋವಿಂದಚಾಮಿ ಕಾರಣ ಅಥವಾ ಆಕೆಯನ್ನು ಕೊಲ್ಲುವ ಉದ್ದೇಶ ಆತನಿಗಿತ್ತು ಎನ್ನುವುದಕ್ಕೆ ಸಾಕ್ಷಾಧಾರವಿಲ್ಲ ಎಂದು ಸೆಪ್ಟೆಂಬರ್‌ನಲ್ಲಿ ತೀರ್ಪು ನೀಡಿದ್ದ ಸರ್ವೋಚ್ಚ ನ್ಯಾಯಾಲಯವು ಮರಣ ದಂಡನೆಯನ್ನು ರದ್ದುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News