ಕೇರಳದಲ್ಲಿ ಮಹಿಳೆಯರಿಗಾಗಿ ಕೆಎಸ್ಸಾರ್ಟಿಸಿ ಪಿಂಕ್ ಬಸ್
ತಿರುವನಂತಪುರಂ,ಜ.7: ಮಹಿಳೆಯರ ಪ್ರಯಾಣಕ್ಕೆ ಉಪಯುಕ್ತವಾಗುವಂತೆ ಕೇರಳ ಕೆಎಸ್ಸಾರ್ಟಿಸಿಯಿಂದ ಪಿಂಕ್ ಬಸ್ ರಸ್ತೆಗಿಳಿಯಲಿದೆ. ಪರೀಕ್ಷಾರ್ಥ ಎರಡು ಬಸ್‌ಗಳು ಓಡಾಟ ಆರಂಭಿಸಲಿದ್ದು ಬಸ್‌ನಲ್ಲಿ ಮಹಿಳಾ ನಿರ್ವಾಹಕಿಯರು ಇರಲಿದ್ದಾರೆ. ಕೇರಳ ಕೆಎಸ್ಸಾರ್ಟಿಸಿಯಲ್ಲಿ ಮಹಿಳಾ ಚಾಲಕಿಯರಿಲ್ಲದ್ದರಿಂದ ಪುರುಷ ಚಾಲಕರು ಬಸ್ ಚಲಾಯಿಸಲಿದ್ದಾರೆ ಎಂದು ಕೆಎಸ್ಸಾರ್ಟಿಸಿ ಸಿಎಂಡಿ. ರಾಜಮಾಣಿಕ್ಯಂ ಪತ್ರಕರ್ತರಿಗೆ ತಿಳಿಸಿದರು.
ಪಿಂಕ್ ಬಸ್ ಗಳಲ್ಲಿರಿಯಾಯತಿ ಟಿಕೆಟ್ ಸೌಲಭ್ಯವಿಲ್ಲ. ಆದರೆ ಕೆಎಸ್ಸಾರ್ಟಿಸಿ ಹೊಸದಾಗಿ ಪ್ರಾರಂಭಿಸುವ ಸೀಝನ್ ಕಾರ್ಡ್ ಉಪಯೋಗಿಸಬಹುದು. ಪೊಲೀಸ್ ಇಲಾಖೆ ಹೊಸದಾಗಿ ಆರಂಭಿಸಿರುವ ಪಿಂಕ್ ಪಾಟ್ರೋಲಿಂಗ್ ವಾಹನಕ್ಕೆ ಸಮಾನವಾಗಿ ಗುಲಾಬಿ ಮತ್ತು ಬಿಳಿಬಣ್ಣದ ಬಸ್‌ಗಳು ಬರಲಿವೆ.
ಈಹಿಂದೆ ಲೇಡಿಸ್ ಓನ್ಲಿ ಬೋರ್ಡ್ ಹಾಕಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ನಡೆಸಿತ್ತು. ಅದು ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ನಂತರ ಬಸ್ ಓಡಾಟ ಸ್ಥಗಿತಗೊಳಿಸಲಾಗಿತ್ತು. ಪ್ರಥಮ ನೋಟದಲ್ಲೇ ಮಹಿಳೆಯರಿಗೆ ಮೀಸಲಾದ ಬಸ್ ಎಂದು ಗೊತ್ತಾಗಲು ಪಿಂಕ್ ಬಣ್ಣದ ಬಸ್‌ನ್ನು ರಸ್ತೆಗಿಳಿಸಲು ನಿರ್ಧರಿಸಲಾಗಿದೆ. ರೂಟ್ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ಸಿಎಂಡಿ ರಾಜಮಾಣಿಕ್ಯಂ ತಿಳಿಸಿದ್ದಾರೆಂದು ವರದಿಯಾಗಿದೆ.