ಕಶ್ಮೀರಿ ವಿದ್ಯಾರ್ಥಿಗಳನ್ನು ‘ಸನ್ಮಾರ್ಗಕ್ಕೆ’ ತರಲು ಆರೆಸ್ಸೆಸ್ ಮುಸ್ಲಿಂ ಸಂಘಟನೆಯಿಂದ ಸಮಾವೇಶ

Update: 2017-01-07 08:04 GMT

ಹೊಸದಿಲ್ಲಿ, ಜ.7: ಆರೆಸ್ಸೆಸ್ ಸಂಯೋಜಿತ ಮುಸ್ಲಿಂ ರಾಷ್ಟ್ರೀಯ ಮಂಚ್ ಶನಿವಾರದಂದು ರಾಜಧಾನಿಯಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಸಮಾವೇಶವೊಂದನ್ನು ಆಯೋಜಿಸಿದೆ. ಕಾಶ್ಮೀರಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ತಂದು ಅವರು ದೇಶ ಕಟ್ಟುವ ಕಾಯಕದಲ್ಲಿ ತಮ್ಮನ್ನು ತೊಡಗಿಸುವಂತೆ ಮಾಡುವುದೇ ಈ ಸಮಾವೇಶದ ಉದ್ದೇಶ ಎಂದು ಹೇಳಲಾಗುತ್ತಿದೆ.

ಸಮಾವೇಶದಲ್ಲಿ ದಿಲ್ಲಿ ಮತ್ತಿತರ ರಾಜ್ಯಗಳಲ್ಲಿ ಹಂಚಿ ಹೋಗಿರುವ ಸುಮಾರು 2,000 ಕಾಶ್ಮೀರಿ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಗೃಹಸಚಿವ ರಾಜನಾಥ್ ಸಿಂಗ್, ಜಮ್ಮು ಕಾಶ್ಮೀರದ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಸಹಿತ ಹಲವಾರು ಕೇಂದ್ರ ಸಚಿವರಿಗೆ ಈ ಸಮಾವೇಶಕ್ಕೆ ಆಹ್ವಾನ ಕಳುಹಿಸಲಾಗಿದೆ. ಆದರೆ ಅವರು ಭಾಗವಹಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಈ ನಡುವಸ ಈ ಸಮಾವೇಶದ ಬಗ್ಗೆ ಕಾಶ್ಮೀರದಲ್ಲಿ ಅಪಸ್ವರ ಕೇಳಲಾರಂಭಿಸಿದ್ದು, ರಾಜ್ಯದಲ್ಲಿ ಬಿಜೆಪಿಯ ಮೈತ್ರಿ ಪಕ್ಷವಾದ ಪಿಡಿಪಿ ತನಗೆ ಈ ಕಾರ್ಯಕ್ರಮದ ಬಗ್ಗೆ ತಿಳಿದಿಲ್ಲ ಎಂದು ಸೂಚ್ಯವಾಗಿ ಹೇಳಿದೆ. ಸಮಾಜವನ್ನು ವಿಭಜಿಸುವುದೇ ಈ ಸಮಾವೇಶದ ಉದ್ದೇಶ ಎಂದು ಪ್ರತ್ಯೇಕತಾವಾದಿಗಳು ಹೇಳುತ್ತಿದ್ದಾರೆ. ಆದರೆ ಇಲ್ಲಿಯ ತನಕ ಪಿಡಿಪಿ ಈ ಸಮಾವೇಶದ ಬಗ್ಗೆ ಬಹಿರಂಗವಾಗಿ ಏನೂ ಹೇಳಿಕೆ ನೀಡಿಲ್ಲ. ಆದರೂ ಕೆಲ ಪಕ್ಷ ನಾಯಕರ ಪ್ರಕಾರ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವ ಹಾಗೂ ಕಾರ್ಯಕ್ರಮ ಆಯೋಜಿಸುವ ಸಂಘ ಪರಿವಾರದ ಜಾಯಮಾನದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎನ್ನುತ್ತಿದ್ದಾರೆ.

ಸಮಾವೇಶವು ಕಾನ್ ಸ್ಟಿಟ್ಯೂಶನ್ ಕ್ಲಬ್ ನಲ್ಲಿ ನಡೆಯಲಿದ್ದು, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಇದರ ಉಪಕುಲಪತಿ ಪ್ರೊ.ತಲತ್ ಅಹ್ಮದ್, ಜಮ್ಮು ಕಾಶ್ಮೀರದ ಬಿಜೆಪಿ ನಾಯಕ ಫಾರೂಖ್ ಖಾನ್ ಭಾಗವಹಿಸಲಿರುವ ಪ್ರಮುಖರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News