ಲಂಚ ಆರೋಪಿಗಳ 3 ದಿನಗಳ ಕಸ್ಟಡಿ ಕೇಳಿದ ಸಿಬಿಐ
ಕೊಚ್ಚಿ,ಜ.7: ಕಟ್ಟಡ ನಿರ್ಮಾಣ ಕಂಪೆನಿಯಿಂದ ಲಂಚ ಪಡೆದ ಆರೋಪದಲ್ಲಿ ಸಿಬಿಐ ಬಂಧಿಸಿರುವ ಆರೋಪಿಗಳನ್ನು 3 ದಿವಸ ಕಸ್ಟಡಿಗೆ ನೀಡಬೇಕೆಂದು ಕೋರ್ಟಿಗೆ ಸಿಬಿಐ ಮನವಿ ಸಲ್ಲಿಸಿದೆ.
ಲಂಚ ಪಡೆದ ಆರೋಪಿಗಳಾದ, ಮುಖ್ಯ ಕಾರ್ಮಿಕ ಆಯುಕ್ತ ಎ.ಕೆ. ಪ್ರತಾಪ್, ಸಹಾಯಕ ಕಾರ್ಮಿಕ ಆಯುಕ್ತ ಡಿ.ಎಸ್. ಜಾಧವ್, ಕಾರ್ಮಿಕ ಜಾರಿ ಅಧಿಕಾರಿ ಸಿ.ಪಿ. ಸುನೀಲ್ ಕುಮಾರ್, ಕೆ.ಕೆ. ಬಿಲ್ಡರ್ಸ್ ಎಚ್‌ಆರ್‌ಒ ಮ್ಯಾನೇಜರ್ ಪಿ.ಕೆ. ಅನೀಶ್‌ರನ್ನು ಹೆಚ್ಚಿನ ತನಿಖೆಗೆ ಗುರಿಪಡಿಸಲು ಸಿಬಿಐ ಕಸ್ಟಡಿಗೆ ಪಡೆಯಲು ಕೋರಿಕೆ ಸಲ್ಲಿಸಿದೆ.
ಸಿಬಿಐ ಅರ್ಜಿಯ ಹಿನ್ನೆಲೆಯಲ್ಲಿ ಆರೋಪಿಗಳನ್ನು ಶನಿವಾರ ಬೆಳಗ್ಗೆ 11 ಗಂಟೆಗೆ ಕೋರ್ಟಿಗೆ ಹಾಜರುಪಡಿಸಲು ನ್ಯಾಯಾಧೀಶರು ಸೂಚಿಸಿದ್ದಾರೆ. ಆರೋಪಿಗಳು ಸಲ್ಲಿಸಿದ ಜಾಮೀನು ಅರ್ಜಿಯನ್ನು ನಂತರ ಪರಿಗಣಿಸಲು ಮುಂದೂಡಲಾಗಿದೆ. ಕ್ಯಾಲಿಕಟ್ ಐ.ಐಎಂನಲ್ಲಿ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಕೆ.ಕೆ ಬಿಲ್ಡರ್ಸ್‌ನ ಎಚ್‌ಆರ್‌ಒ ಮ್ಯಾನೇಜರ್ ಪಿ.ಕೆ. ಅನೀಶ್‌ರಿಂದ ಲಂಚ ಪಡೆಯುತ್ತಿದ್ದಾಗ ಆರೋಪಿಗಳನ್ನು ಸಿಬಿಐ ಬಂಧಿಸಿತ್ತು ಎಂದು ವರದಿ ತಿಳಿಸಿದೆ.