56ರ ಮಹಿಳಾ ಗಗನಯಾತ್ರಿಯಿಂದ 6.5ಗಂಟೆ ಕಾಲ ಬಾಹ್ಯಾಕಾಶ ನಡಿಗೆ

Update: 2017-01-07 13:41 GMT

  ಹೊಸದಿಲ್ಲಿ,ಜ.7: 56ರ ಹರೆಯದ ಅಮೆರಿಕನ್ ಗಗನಯಾತ್ರಿ ಪೆಗ್ಗಿ ವಿಟ್ಸನ್‌ಗೆ ದಾಖಲೆಗಳನ್ನು ಮುರಿಯುವುದೇ ಹವ್ಯಾಸ. ಇಂದು ನಾಸಾಕ್ಕಾಗಿ ಬಾಹ್ಯಾಕಾಶ ನಡಿಗೆಯನ್ನು ಪೂರ್ಣಗೊಳಿಸುವುದರೊಂದಿಗೆ ಈ ಸಾಧನೆಯನ್ನು ಮಾಡಿದ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಾಹ್ಯಾಕಾಶ ನಡಿಗೆ ಬರೋಬ್ಬರಿ ಆರೂವರೆ ಗಂಟೆ ಅವಧಿಯದಾಗಿತ್ತು ಎನ್ನುವುದನ್ನು ಗಮನಿಸಿದರೆ ಇದೇನೂ ಕಡಿಮೆ ಸಾಧನೆಯಲ್ಲ.

ಕಳೆದ ವರ್ಷದ ನವಂಬರ್‌ನಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪಯಣ ಆರಂಭಿಸಿದಾಗ ಬಾಹ್ಯಾಕಾಶ ಯಾತ್ರೆ ಕೈಗೊಳ್ಳುತ್ತಿರುವ ಅತ್ಯಂತ ಹಿರಿಯ ಮಹಿಳೆ ಎಂಬ ದಾಖಲೆ ವಿಟ್ಸನ್‌ದಾಗಿತ್ತು. ಈಗ ಕೈಗೊಂಡಿರುವ ‘ಎಕ್ಸಪೆಡಿಷನ್ 50/51’ ಅಭಿಯಾನ ಪೂರ್ಣಗೊಂಡ ಬಳಿಕ ಬಾಹ್ಯಾಕಾಶದಲ್ಲಿ ಅತ್ಯಂತ ಹೆಚ್ಚಿನ ಸಮಯ(377 ದಿನಗಳು)ವನ್ನು ಕಳೆದಿರುವ ಅಮೆರಿಕದ ಗಗನಯಾತ್ರಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಲಿದ್ದಾರೆ. ಇಂದಿನದು ಅವರ ಏಳನೇ ಬಾಹ್ಯಾಕಾಶ ನಡಿಗೆಯಾಗಿದೆ.

ಮುಂದಿನ ನಿಗದಿತ ಬಾಹ್ಯಾಕಾಶ ನಡಿಗೆ ಎಕ್ಸಪೆಡಿಷನ್ 51ನ್ನು ಅವರು ನಡೆಸಿದಾಗ ಇನ್ನಷ್ಟು ದಾಖಲೆಗಳು ಸೃಷ್ಟಿಯಾಗಲಿವೆ.

ಪ್ರಸಕ್ತ ಅಭಿಯಾನದಲ್ಲಿ ವಿಟ್ಸನ್ ಅವರು ಆರು ತಿಂಗಳು ಬಾಹ್ಯಾಕಾಶದಲ್ಲಿ ಕಳೆಯಲಿದ್ದಾರೆ. ಅಂದ ಹಾಗೆ ಮುಂದಿನ ತಿಂಗಳು ಅವರು 57ನೇ ವರ್ಷಕ್ಕೆ ಕಾಲಿರಿಸಲಿದ್ದಾರೆ.

ಬಾಹ್ಯಾಕಾಶ ನಿಲ್ದಾಣದ ವಿದ್ಯುತ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಇದಕ್ಕಾಗಿ ಹಮ್ಮಿಕೊಳ್ಳಲಾದ ಎರಡು ಬಾಹ್ಯಾಕಾಶ ನಡಿಗೆಗಳಲ್ಲಿ ಇಂದಿನದು ಮೊದಲನೆಯದಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News